*  ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಿನಿ ಗ್ರಾಮದಲ್ಲಿ ನಡೆದ ಘಟನೆ *  ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಸಾವು*  ಶಿರಡಿ ಸಾಯಿಬಾಬಾ ದೇವಸ್ಥಾನ ದರ್ಶನ ಪಡೆದು ವಾಪಸ್‌ ಆಗುತ್ತಿದ್ದ ವೇಳೆ ನಡೆದ ದುರ್ಘಟನೆ 

ಬೆಳಗಾವಿ(ಜು.03):  ಕುಟುಂಬ ಸಮೇತರಾಗಿ ಮಹಾರಾಷ್ಟ್ರದ ಶಿರಡಿಗೆ ಹೋಗಿ ವಾಪಸಾಗುತ್ತಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಿನಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಂಗಳೂರಿನ ಉತ್ತರ ಮೀನಾಕ್ಷಿ ನಗರದ ತ್ರಿಲೇಶ (42), ಸಂಜನಾ ಮಹೇಶ್ವರಿ (27), ಜಿತಿಯಾ ತ್ರಿಲೇಶ(11) ಮತ್ತು ಅರಿಣಿ (40) ಮೃತಪಟ್ಟವರು.

ಕಂಟೈನರ್‌ ಲಾರಿಯೊಂದು ಕೆಟ್ಟು ನಿಂತಿತ್ತು. ಆದರೆ, ಅದರ ಚಾಲಕ ರಸ್ತೆಯಲ್ಲಿಯೇ ನಿಲ್ಲಿಸಿದ್ದ. ಇದಕ್ಕೆ ತ್ರಿಲೇಶ್‌ ಅವರ ಕಾರು ಡಿಕ್ಕಿ ಹೊಡೆದಿದೆ. ಆಗ ಇದೆ ವೇಳೆಗೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರಿಣಿಯವರು ತೀವ್ರವಾಗಿ ಗಾಯಗೊಂಡಿದ್ದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಅಸುನೀಗಿದರು ಎಂದು ಕೊಲ್ಲಾಪುರ ಪೊಲೀಸರು ತಿಳಿಸಿದ್ದಾರೆ.

KSRTC, ಖಾಸಗಿ ಬಸ್ ನಡುವೆ ಅಪಘಾತ; 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಕಳೆದ ಒಂದೂವರೆ ತಿಂಗಳ ಹಿಂದೆ ನೂತನ ಕಾರು ತೆಗೆದುಕೊಂಡಿದ್ದ ತ್ರಿಲೇಶ್‌ ಅವರು ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದಿದ್ದರು. ನಂತರ ಅಲ್ಲಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕೊಲ್ಹಾಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.