ನಾಳೆಯಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ: ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಆದ್ಯತೆ
ರಾಜ್ಯದ ಐತಿಹಾಸಿಕ ಬಸವಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಡಿ.11ರ ಬೆಳಗ್ಗೆ (ಸೋಮವಾರ) ಕಡಲೆಕಾಯಿ ಪರಿಷೆಗೆ (Kadalekai parishe) ಚಾಲನೆ ಸಿಗಲಿದೆ.
ಬೆಂಗಳೂರು (ಡಿ.10): ರಾಜ್ಯದ ಐತಿಹಾಸಿಕ ಬಸವಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಡಿ.11ರ ಬೆಳಗ್ಗೆ (ಸೋಮವಾರ) ಕಡಲೆಕಾಯಿ ಪರಿಷೆಗೆ (Kadalekai parishe) ಚಾಲನೆ ಸಿಗಲಿದೆ. ಪರಿಷೆಯ ಸಿದ್ಧತೆಯನ್ನು ಪರಿಶೀಲನೆ ಮಾಡಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರಡ್ಡಿ ಅವರು ಪ್ಲಾಸ್ಟಿಕ್ ಮುಕ್ತವಾಗಿ ಪರಿಷೆಯನ್ನು ಮಾಡಲು ಕರೆ ನೀಡಿದ್ದಾರೆ. ಈಗಾಗಲೇ ಬಸವನಗುಡಿ ಸುತ್ತಮುತ್ತಲೂ 1000ಕ್ಕೂ ಅಧಿಕ ಅಂಗಡಿ- ಮುಂಗಟ್ಟುಗಳನ್ನು ತೆರೆಯಲಾಗಿದೆ.
ಸ್ಥಳೀಯ ಶಾಸಕ ರವಿ ಸುಬ್ರಹ್ಮಣಗ್ಯ ಅವರೊಂದಿಗೆ ಕಡಲೆ ಕಾಯಿ ಪರಿಷೆ ಉದ್ಘಾಟನೆ ಸಿದ್ಧತೆ ಕುರಿತು ಪರಿಶೀಲನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ನಾಳೆ ಅಧಿಕೃತವಾಗಿ ಕಡಲೆಕಾಯಿ ಬಸವನಗುಡಿ ಕಡಲೆಕಾಯಿ ಪರಿಷೆ ಪ್ರಾರಂಭವಾಗಲಿದೆ. ಸುಮಾರು 1000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಬಸವಗುಡಿ ಸುತ್ತಮುತ್ತ ತೆರೆಯಲಾಗಿದೆ. ಈಗಾಗಲೇ ಬಸವನಗುಡಿಯಲ್ಲಿ ಜಾತ್ರೆ ವಾತವರಣ ಶುರುವಾಗಿದೆ. ನಾನು ಹಾಗೂ ಶಾಸಕರು ಇಂದು ಇಲ್ಲಿ ಬಂದು ಪರಿಶೀಲನೆ ನಡೆಸಿದ್ದೇವೆ. ಪ್ಲಾಸ್ಟಿಕ್ ಬಳಸ ಬಾರ್ದು ಅನ್ನೋದು ನಿಯಮ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸುಮಾರು ವರ್ಷದಿಂದ ಪ್ರಯತ್ನ ಪಟ್ಟು ಇದೀಗ ಪರಿಷೆಯಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಬಂದಿದೆ. ಎಲ್ಲ ಇಲಾಖೆಯವರು ಸಹ ತಮ್ಮ ತಮ್ಮ ಕೆಲಸಗಳನ್ನು ಜವಾಬ್ದಾರಿಯಿಂದ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಸಹ ಸೆಕ್ಯುರಿಟಿಗಾಗಿ ಅಳವಡಿಸಲಾಗಿದೆ. 12 ಲಕ್ಷಕ್ಕು ಹೆಚ್ಚಿನ ಜನ ಈ ಪರಿಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಕ್ರಮ ವಹಿಸಲಾಗಿದೆ.65 ವರ್ಷ ಮೇಲ್ಪಟ್ಟವರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಚತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂದು ತಿಳಿಸಿದರು.
ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್ಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಎನ್.ಆರ್.ಕಾಲೋನಿಯ ಎಪಿಎಸ್ ಕಾಲೇಜು ಮೈದಾನ, ಹಯವದನರಾವ್ ರಸ್ತೆಯ ಕೊಹಿನೂರು ಆಟದ ಮೈದಾನ ಹಾಗೂ ಬುಲ್ಟೆಂಪಲ್ ರಸ್ತೆಯ ಉದಯಭಾನು ಮೈದಾನದಲ್ಲಿ ಪಾಕಿಂಗ್ಗೆ ಅವಕಾಶ ನೀಡಲಾಗಿದೆ.