* ತಲೆ ಸುತ್ತು ಬಂದು ಬ್ಯಾಗ್‌ ಬಿಟ್ಟು ಹೋಗಿದ್ದ ಸಂಖ್ಯಾಶಾಸ್ತ್ರಜ್ಞ* ಫುಟ್‌ಪಾತ್‌ನಲ್ಲಿ ಅನಾಥ ಬ್ಯಾಗ್‌: ಆತಂಕ, ಪರಿಶೀಲಿಸಿದಾಗ ಬಟ್ಟೆಪತ್ತೆ!* ಬ್ಯಾಗ್‌ ಸಿಕ್ಕ ಗಾಂಧಿನಗರದ 5ನೇ ಮುಖ್ಯ ರಸ್ತೆ ಪೊಲೀಸರಿಂದ ಬ್ಲಾಕ್‌* ಬಾಂಬ್‌ ಸ್ವಾಡ್‌ನಿಂದ ಬ್ಯಾಗ್‌ ಪರಿಶೀಲನೆ

ಬೆಂಗಳೂರು(ಮೇ.06): ನಗರದ ಗಾಂಧಿನಗರದ 5ನೇ ಮುಖ್ಯರಸ್ತೆ ಪಾದಚಾರಿ ಮಾರ್ಗದಲ್ಲಿ ಗುರುವಾರ ಅನಾಥವಾಗಿ ಬಿದ್ದಿದ್ದ ಬ್ಯಾಗ್‌ನಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಮಧ್ಯಾಹ್ನ 12ರ ಸುಮಾರಿಗೆ ಪಾದಚಾರಿ ಮಾರ್ಗದಲ್ಲಿ ಬ್ಯಾಗ್‌ ಕಂಡು ಬಂದಿತು. ಈ ಸಂಬಂಧ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಬಂದು 5ನೇ ಮುಖ್ಯರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರ ನಿರ್ಬಂಧಿಸಿದರು. ಹೀಗಾಗಿ ಕೆಲ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಮಾಹಿತಿ ಮೇರೆಗೆ ಬಳಿಕ ಸ್ಥಳಕ್ಕೆ ಬಂದ ಬಾಂಬ್‌ ನಿಷ್ಕಿ್ರಯ ದಳದ ಸಿಬ್ಬಂದಿ ಬ್ಯಾಗ್‌ ತಪಾಸಣೆ ಮಾಡಿದಾಗ, ಬಟ್ಟೆಗಳಿರುವುದು ಕಂಡು ಬಂದಿತು. ಹೀಗಾಗಿ ಪೊಲೀಸರು ಸೇರಿದಂತೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ಸಂಖ್ಯಾಶಾಸ್ತ್ರಜ್ಞನ ಬ್ಯಾಗ್‌: ಈ ಬ್ಯಾಗ್‌ ಉತ್ತರಪ್ರದೇಶದ ಕಾನ್ಪುರ ಮೂಲದ ಸಂಖ್ಯಾಶಾಸ್ತ್ರಜ್ಞ ಹರ್ಷಿತ್‌ ಶುಕ್ಲಾ (23) ಎಂಬುವವರಿಗೆ ಸೇರಿದ್ದಾಗಿದೆ. ಸಂಖ್ಯಾಶಾಸ್ತ್ರದ ಬಗ್ಗೆ ಪ್ರಚಾರ ಮಾಡಲು ಬುಧವಾರ ಪುಣೆಯಿಂದ ನಗರದ ಮಹಾಬೋಧಿ ಸೊಸೈಟಿಗೆ ಬಂದಿದ್ದರು. ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ಬ್ಯಾಗ್‌ ಹಿಡಿದುಕೊಂಡು ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿ ಬರುವಾಗ, ಕೊಂಚ ತಲೆ ಸುತ್ತು ಬಂದಿದೆ. ಈ ವೇಳೆ ಪಾದಚಾರಿ ಮಾರ್ಗದಲ್ಲೇ ಬ್ಯಾಗ್‌ ಬಿಟ್ಟು ಮುಂದೆ ಸಾಗಿದ್ದಾರೆ.

ಬಳಿಕ ಅಲ್ಲೇ ಮಳಿಗೆವೊಂದರ ಬಳಿ ಕುಳಿತು ಕೆಲ ಕಾಲ ವಿಶ್ರಾಂತಿ ಪಡೆದಿದ್ದಾರೆ. ಸಹಜ ಸ್ಥಿತಿಗೆ ಮರಳಿದಾಗ ಬ್ಯಾಗ್‌ ಎಲ್ಲಿ ಬಿಟ್ಟೆಎಂಬುದನ್ನು ಮರೆತಿದ್ದಾರೆ. ಹೀಗಾಗಿ ಹರ್ಪಿತ್‌ ಶುಕ್ಲಾ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಬಂದು ಬ್ಯಾಗ್‌ ಕಳೆದುಹೋಗಿರುವ ಬಗ್ಗೆ ದೂರು ನೀಡಲು ಬಂದಿದ್ದರು. ಅಷ್ಟರಲ್ಲಿ ಗಾಂಧಿನಗರದಲ್ಲಿ ಪತ್ತೆಯಾಗಿದ್ದ ಬ್ಯಾಗ್‌ ತೋರಿಸಿದಾಗ ಅದು ನನ್ನದೇ ಬ್ಯಾಗ್‌ ಎಂದು ಹೇಳಿದರು. ಹೀಗಾಗಿ ಅವರ ಪೂರ್ವಾಪರ ವಿಚಾರಿಸಿ ಬ್ಯಾಗನ್ನು ಹರ್ಪಿತ್‌ ಶುಕ್ಲಾಗೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.