ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್, ಶೂ ರ್ಯಾಕ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದಾನೆ. ಕಳ್ಳತನದ ನಂತರ ಪಶ್ಚಾತ್ತಾಪದಿಂದ ದೇವಸ್ಥಾನಕ್ಕೆ ತೆರಳಿದ್ದ ಆರೋಪಿಯನ್ನು ಪೊಲೀಸರು ಸಿಸಿಟಿವಿ ಸಹಾಯದಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ.

ಬೆಂಗಳೂರು: ಮನೆಯ ಶೂ ರ್ಯಾಕ್‌ಗಳಲ್ಲಿ ಅಥವಾ ಹೂವಿನ ಪಾಟ್‌ಗಳೊಳಗೆ ಮನೆ ಬೀಗದ ಕೀಲಿಯನ್ನು ಇಟ್ಟು ಹೋಗುವ ಮನೆ ಮಾಲೀಕರೇ ಎಚ್ಚರಿಕೆ ವಹಿಸಿ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಅಕಸ್ಮಾತ್ತಾಗಿ ಕೀ ಕೈಗೆ ಸಿಕ್ಕರೆ ಮನೆ ಕಳ್ಳತನವಾಗುವುದು ಖಚಿತ ಎನ್ನುವುದನ್ನು ಈ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ.

ಬಾಡಿಗೆ ಮನೆ ಹುಡುಕಲು ಬಂದವನೇ ಕಳ್ಳ!

ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್‌ ಒಬ್ಬನೇ ಮನೆ ಕಳ್ಳನಾಗಿ ಬದಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ವೈಟ್‌ಫೀಲ್ಡ್ ಪೊಲೀಸರು ಈ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಕಿರಣ್ ಎಂದು ಗುರುತಿಸಲಾಗಿದ್ದು, ಆತ ವೈಟ್‌ಫೀಲ್ಡ್ ನಿವಾಸಿ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಕಿರಣ್, ಕೋವಿಡ್ ಅವಧಿಯಲ್ಲಿ ಭಾರೀ ನಷ್ಟ ಅನುಭವಿಸಿದ್ದ. ಈ ಹಿನ್ನೆಲೆ ತನ್ನ ಫೋಟೋ ಸ್ಟುಡಿಯೋ ಮುಚ್ಚಿದ್ದ ಆತ, ಕ್ಯಾಮೆರಾ ಹೊಂದಿದ್ದ ಕಾರಣ ಸಣ್ಣಪುಟ್ಟ ಕಾರ್ಯಕ್ರಮಗಳ ಫೋಟೋಗ್ರಫಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಕೀ ಕಂಡು ಕಳ್ಳತನಕ್ಕೆ ಇಳಿದ ಆರೋಪಿ

ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿ ಪ್ರದೇಶದಲ್ಲಿ ಕಿರಣ್ ಬಾಡಿಗೆ ಮನೆ ಹುಡುಕುತ್ತಾ ಸುತ್ತಾಡುತ್ತಿದ್ದ. ಈ ವೇಳೆ ‘ಟು ಲೆಟ್’ ಬೋರ್ಡ್ ಕಾಣಿಸಿಕೊಂಡು, ಕಟ್ಟಡದೊಳಗೆ ಹೋಗಿದ್ದಾನೆ. ಅಲ್ಲಿ ಮನೆಯ ಶೂ ರ್ಯಾಕ್‌ನಲ್ಲಿ ಇಡಲಾಗಿದ್ದ ಮನೆ ಬೀಗದ ಕೀ ಗಮನಕ್ಕೆ ಬಂದಿದೆ. ಶೂ ರ್ಯಾಕ್‌ನಲ್ಲಿದ್ದ ಕೀಲಿಯನ್ನು ತೆಗೆದುಕೊಂಡು ಮನೆ ಬಾಗಿಲು ತೆರೆದ ಕಿರಣ್, ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಅಲ್ಲಿದ್ದ ಸುಮಾರು ₹55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಸಿಸಿಟಿವಿಯಿಂದ ಸುಳಿವು

ಈ ಸಂಬಂಧ ಮನೆ ಮಾಲೀಕ ಜಗದೀಶ್ ಅವರು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಗದೀಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಶಾಲೆಯಿಂದ ಮಗ ವಾಪಸ್ ಬೇಗ ಬರುವುದರಿಂದ ಅವನಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ, ಅವರು ಮನೆಯ ಶೂ ರ್ಯಾಕ್‌ನಲ್ಲಿ ಬೀಗದ ಕೀಲಿಯನ್ನು ಇಟ್ಟು ಹೋಗಿದ್ದರು. ಇದೇ ಅಜಾಗರೂಕತೆ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಕಿರಣ್‌ನ ಚಲನವಲನ ಪತ್ತೆಯಾಯಿತು. ತಂತ್ರಜ್ಞಾನ ಆಧಾರಿತ ತನಿಖೆಯಿಂದ ಆರೋಪಿಯ ಜಾಡು ಶೀಘ್ರದಲ್ಲೇ ಪತ್ತೆಯಾಯಿತು.

ಪಶ್ಚಾತ್ತಾಪ ಕಾಡಿ ದೇವರ ಮೊರೆ

ಕಳ್ಳತನದ ನಂತರ ಕಿರಣ್‌ಗೆ ಪಶ್ಚಾತ್ತಾಪ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ, ಆತ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ಅಲ್ಲಿಗೆ ಹೋಗಿ ಕೇಶಮುಂಡನ ಮಾಡಿ ದೇವರಿಗೆ ಹರಕೆ ಸಲ್ಲಿಸಿದ್ದಾನೆ. ಮಲೆ ಮಹದೇಶ್ವರ ಬೆಟ್ಟದಿಂದ ವಾಪಸ್ ಬರುತ್ತಿದ್ದ ಸಂದರ್ಭದಲ್ಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆರೋಪಿ ಬಂಧನದಲ್ಲಿದ್ದು, ಕಳ್ಳತನಕ್ಕೆ ಸಂಬಂಧಿಸಿದ ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಘಟನೆ ಮನೆಯ ಕೀಲಿಯನ್ನು ಬಹಿರಂಗ ಸ್ಥಳಗಳಲ್ಲಿ ಇಡುವುದರಿಂದ ಉಂಟಾಗುವ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ. ಪೊಲೀಸರು ಸಾರ್ವಜನಿಕರಿಗೆ, ಮನೆ ಕೀಲಿಗಳನ್ನು ಶೂ ರ್ಯಾಕ್‌ಗಳು, ಪಾಟ್‌ಗಳು ಅಥವಾ ಸುಲಭವಾಗಿ ಕಂಡುಬರುವ ಸ್ಥಳಗಳಲ್ಲಿ ಇಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.