ಶಿವಾನಂದ ಗೊಂಬಿ 

ಹುಬ್ಬಳ್ಳಿ[ಜ.22]:  ಹುಬ್ಬಳ್ಳಿ-ಧಾರವಾಡ ಮಹಾನಗರ ನಡುವೆ ಕಳೆದ 15 ವರ್ಷಗಳಿಂದ ಸಂಚರಿಸುತ್ತಿದ್ದ ಬೇಂದ್ರೆ ಸಾರಿಗೆ ಬಸ್‌ಗಳು ಮತ್ತೆ ರದ್ದಾಗುವ ಲಕ್ಷಣಗಳು ದಟ್ಟವಾಗಿವೆ. ಈ ಬಸ್‌ಗಳನ್ನು ರದ್ದುಪಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ನೋಟಿಪಿಕೇಶನ್ ಹೊರಡಿಸಲಿದೆ. ಬಿಆರ್ ಟಿಎಸ್ ಉದ್ಘಾಟನೆಗೂ ಮುನ್ನವೇ ಬೇಂದ್ರೆ ಬಸ್‌ಗಳ ಬಂದ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಈ ಬೆಳವಣಿಗೆ ಗೊತ್ತಾಗುತ್ತಿದ್ದಂತೆ ಬೇಂದ್ರೆ ಸಾರಿಗೆ ಸಂಸ್ಥೆಯೂ ನಮಗೆ ಪರ್ಯಾಯ ಮಾರ್ಗ ಸೂಚಿಸುವಂತೆ ಕೇಳುತ್ತಿದೆ. ಬೇಂದ್ರೆ ಸಾರಿಗೆಯು ಕಳೆದ 15 ವರ್ಷ ಅಂದರೆ 2004ರಿಂದ ಇಲ್ಲಿ ಸಂಚರಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಜನರಿಗೆ ಒಂದು ರೀತಿಯಲ್ಲಿ ನಮ್ಮವೇ ಇವು ಬಸ್ ಗಳು ಎಂಬಂತೆ ಸೇವೆ ನೀಡಿದ್ದುಂಟು. ಜನಮನ ಗೆದ್ದಿರುವ ಬೇಂದ್ರೆ ಸಾರಿಗೆ ಬಂದ್ ಮಾಡುವುದು ಸರಿಯಲ್ಲ, ಪರ್ಯಾಯ ಮಾರ್ಗ ನೀಡಿ ಎನ್ನುವ ಬೇಡಿಕೆ ಇಟ್ಟಿದೆ. ಇನ್ನೂ ಬೇಂದ್ರೆ ಸಾರಿಗೆಯು ಕಳೆದ 15 ವರ್ಷಗಳಿಂದ ಇಲ್ಲಿ ಸೇವೆ ನೀಡುತ್ತಿದೆ. ಸುಮಾರು 300ಕ್ಕೂ ಅಧಿಕ ಜನ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಕಾಏಕಿ ರದ್ದುಪಡಿಸಿದರೆ ಹೇಗೆ ? ನಮಗೆ ಪರ್ಯಾಯ ಮಾರ್ಗ ಸೂಚಿಸಿ ನಾವು ಅಲ್ಲಿ ನಮ್ಮ ಬಸ್‌ಗಳನ್ನು ಓಡಿಸುತ್ತೇವೆ. ಇಲ್ಲದಿದ್ದಲ್ಲಿ 300 ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತೆ ಎಂದು ಬೇಂದ್ರೆ ಸಾರಿಗೆ ಸಂಸ್ಥೆಯೂ ಮನವಿ ಮಾಡಿದೆ. 

ಮೊದಲೇ ಆಗಬೇಕಿತ್ತು? 

ಕಳೆದ ವರ್ಷವೇ ಬೇಂದ್ರೆ ಸಾರಿಗೆ ರದ್ದಾಗುವ ಆತಂಕವಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಬೇಂದ್ರೆ ಸಾರಿಗೆ ಸೇವೆಯನ್ನು ನವೀಕರಣ ಮಾಡದೇ ರದ್ದುಪಡಿಸಿತ್ತು. ಆಗ ಬೇಂದ್ರೆ ಸಾರಿಗೆ ಸಂಸ್ಥೆಯೂ ಕರ್ನಾಟಕ ರಾಜ್ಯ ಸಾರಿಗೆ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಅಲ್ಲಿ ಮುಂದಿನ 5 ವರ್ಷಗಳ ಕಾಲ ನ್ಯಾಯಾಧಿಕರಣವೂ ಪರವಾನಗಿ ಕೊಟ್ಟಿದೆ. ಆದರೆ ಹೀಗೆ ಪರವಾನಗಿ ಕೊಟ್ಟಿರುವ ಆದೇಶದಲ್ಲಿ ‘ಬೇಂದ್ರೆ ಸಾರಿಗೆ ವ್ಯವಸ್ಥೆಯಿಂದ ಸಾರಿಗೆ ಸಂಸ್ಥೆಗೆ ಹಾನಿಯಾಗುತ್ತಿದ್ದರೆ ರದ್ದುಪಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರದ ಅಂತಿಮ ನಿರ್ಧಾರ ಕೈಗೊಳ್ಳಬಹುದು’ ಎಂಬ ಅಂಶವಿದೆಯಂತೆ. ಅದರ ಆಧಾರದ ಮೇಲೆ ಇದೀಗ ರದ್ದುಪಡಿಸಲು ಸರ್ಕಾರ ಮುಂದಡಿಯಿಟ್ಟಿದೆ. 

ಬಂದ್ ಮಾಡುವುದೇಕೆ? 

ಬಿಆರ್‌ಟಿಎಸ್ ಬಸ್ ಸಂಚಾರ ಪ್ರಾರಂಭವಾಗಿ ಆಗಲೇ ಒಂದೂವರೆ ವರ್ಷವಾಗಿದೆ. ಬಿಆರ್‌ಟಿಎಸ್ ಬಸ್ ಸಂಚಾರಕ್ಕೆ ಕನಿಷ್ಠವೆಂದರೂ 5 ಕೋಟಿ ಖರ್ಚಾಗುತ್ತದೆ. ಆದಾಯ ಮಾತ್ರ 3 ಕೋಟಿ ಬರುತ್ತಿದೆ. ಇನ್ನು 2 ಕೋಟಿ ಹಾನಿಯಲ್ಲಿದೆ. ಇದನ್ನು ‘ನೋ ಲಾಸ್ ನೋ ಫ್ರಾಫಿಟ್’ ಮಾದರಿಯಲ್ಲಿ ಓಡಿಸುವಂತಾಗಬೇಕೆಂದರೆ ಬೇಂದ್ರೆ ಬಸ್ ರದ್ದುಪಡಿಸುವುದು ಅನಿವಾರ್ಯ ಎಂಬುದು ಬಿಆರ್‌ಟಿಎಸ್ ಅಧಿಕಾರಿಗಳ ವಾದ. ಇದನ್ನೇ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಆ ಪ್ರಕ್ರಿಯೆ ನಡೆದಿದೆ. ಈ ವಿಷಯವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಎರಡ್ಮೂರು ಬಾರಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯೂ ನಡೆದಿದೆ. ರದ್ದುಪಡಿಸಲು ಏನು ಮಾಡಬೇಕು ಎಂಬ ಚರ್ಚೆಯೂ ಈ ಸಭೆಯಲ್ಲಿ ಮಾಡಲಾಗಿದೆ. ಮುಂದೆ ಮತ್ತೆ ಬೇಂದ್ರೆ ಸಾರಿಗೆ ಸಂಸ್ಥೆ ಕೋರ್ಟ್‌ಗೆ ಹೋಗಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರ ಬೇಂದ್ರೆ ಸಾರಿಗೆಯನ್ನು ರದ್ದುಪಡಿಸಬೇಕೆಂದರೆ ಸಚಿವ ಸಂಪುಟದಲ್ಲಿ ಚರ್ಚಿಸಿ ನೋಟಿಫಿಕೇಶನ್ ಹೊರಡಿಸಬೇಕು. ಅಂದಾಗ ಮಾತ್ರ ಬೇಂದ್ರೆ ಸಾರಿಗೆ ರದ್ದಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಫೆ. 2 ರೊಳಗೆ ರದ್ದು ಬಿಆರ್‌ಟಿಎಸ್ ಉದ್ಘಾಟನೆಯೂ ಫೆ.2 ರಂದು ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಲೋಕಾರ್ಪಣೆಗೊಳಿಸಲಿದ್ದಾರೆ. ಅದಕ್ಕಿಂತ ಮುಂಚಿತವಾಗಿ ಬೇಂದ್ರೆ ಸಾರಿಗೆ ರದ್ದುಪಡಿಸಿ ನೋಟಿಫಿಕೇಶನ್ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಅದರೊಳಗೆ ಆದೇಶ ಪತ್ರ ಹೊರಬೀಳುವ ಸಾಧ್ಯತೆ ಇದೆ. ಸರ್ಕಾರ ಪರ್ಯಾಯ ಮಾರ್ಗ ಕೊಟ್ಟು ರದ್ದು ಪಡಿಸುತ್ತದೆಯೋ ಅಥವಾ ಯಾವುದೇ ಮಾರ್ಗ ಸೂಚಿಸುವ ಗೋಜಿಗೆ ಹೋಗುವುದಿಲ್ಲವೋ ಎಂಬುದನ್ನು ಕಾಯ್ದು ನೋಡಬೇಕಿದೆ.