*   ಉಷ್ಣ ವಿದ್ಯುತ್‌ ಸ್ಥಾವರಗಳ ಉತ್ಪಾದನೆ ಕಡಿತ*   ಇನ್ನೆರಡು ದಿನಗಳಲ್ಲಿ ಖಾಲಿಯಾಗಲಿರುವ ಕಲ್ಲಿದ್ದಲು *   ಕಲ್ಲಿದ್ದಲು ಪೂರೈಕೆ ಪೂರ್ಣ ಸ್ಥಗಿತವಾದರೆ ಮೂರೂ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತ 

ಬಳ್ಳಾರಿ(ಅ.10): ರಾಜ್ಯದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ(Power Plants) ಕಲ್ಲಿದ್ದಲು ಕೊರತೆ ಮುಂದುವರೆದಿದ್ದು, ಬಳ್ಳಾರಿ(Ballari) ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(BTPS)ದ ಎರಡು ಘಟಕಗಳು ಕಳೆದ ಮೂರು ದಿನಗಳಿಂದ ವಿದ್ಯುತ್‌(Electricity) ಉತ್ಪಾದನೆ ಸ್ಥಗಿತಗೊಳಿಸಿವೆ. ಸದ್ಯ ಒಂದು ಘಟಕದಿಂದ ಮಾತ್ರ ವಿದ್ಯುತ್‌ ಉತ್ಪಾದನೆ ಮುಂದುವರಿದಿದೆ.

ಇನ್ನು ರಾಯಚೂರಿನ(Raichur) ಆರ್‌ಟಿಪಿಎಸ್‌(RTPS), ವೈಟಿಪಿಎಸ್‌(YTPS) ಸ್ಥಾವರಗಳಲ್ಲಿ ಕಲ್ಲಿದ್ದಲಿನ ಅಭಾವ ಉಂಟಾಗಿದ್ದು, ಉಭಯ ಸ್ಥಾವರಗಳಿಂದ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಸ್ಥಾವರಗಳಲ್ಲಿ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ ಎಂದು ತಿಳಿದುಬಂದಿದೆ.

ಹೆಚ್ಚು ಕಲ್ಲಿದ್ದಲು ಪೂರೈಸಲು ಕೇಂದ್ರ ಸಮ್ಮತಿ: ಸಿಎಂ ಬೊಮ್ಮಾಯಿ

ಕಲ್ಲಿದ್ದಲು ಕೊರತೆಯಿಲ್ಲ:

ವಾರ್ಷಿಕ ದುರಸ್ತಿ ಹಿನ್ನೆಲೆ ಎರಡು ಘಟಕಗಳ ವಿದ್ಯುತ್‌ ಸ್ಥಗಿತಗೊಳಿಸಿದ್ದೇವೆ. ಕಲ್ಲಿದ್ದಲು(Coal) ಕೊರತೆಯಿಲ್ಲ, ನಿತ್ಯ ಕಲ್ಲಿದ್ದಲು ಪೂರೈಕೆಯಾಗುತ್ತಿದೆ ಎಂದು ಬಿಟಿಪಿಎಸ್‌ ಅಧಿಕಾರಿಗಳು ಹೇಳುತ್ತಿದ್ದರೂ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸುತ್ತಿವೆ. ಘಟಕದಲ್ಲಿ ಅಗತ್ಯವಿರುವಷ್ಟು ಕಲ್ಲಿದ್ದಲ್ಲಿನ ಸಂಗ್ರಹವೂ ಇಲ್ಲ ಎಂದು ತಿಳಿದುಬಂದಿದೆ.

ಬಿಟಿಪಿಎಸ್‌ನ ಮೂರು ಘಟಕಗಳಿಂದ ನಿತ್ಯ 1700 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಮೂರು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಿತ್ಯ 25 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಬೇಕು. ಆದರೆ, ಕಲ್ಲಿದ್ದಲು ಪೂರೈಕೆಯಾಗುತ್ತಿರುವುದು ಬರೀ 8 ಸಾವಿರ ಮೆ.ಟನ್‌ ಮಾತ್ರ. ಹೀಗಾಗಿ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲಿನ ಅಭಾವ ಎದುರಾಗಿದೆ.

ಬಿಟಿಪಿಎಸ್‌ನ ಮೂಲಗಳು ನೀಡುವ ಮಾಹಿತಿ ಪ್ರಕಾರ, ಸದ್ಯ 15 ಸಾವಿರ ಮೆ.ಟನ್‌ ಕಲ್ಲಿದ್ದಲು ಮಾತ್ರ ಇದ್ದು, ಇನ್ನೆರಡು ದಿನಗಳಲ್ಲಿ ಖಾಲಿಯಾಗಲಿದೆ. ಇಂದು ಅಥವಾ ನಾಳೆ ಮತ್ತಷ್ಟು ಕಲ್ಲಿದ್ದಲು ಬರುವ ಸಾಧ್ಯತೆ ಇದೆ. ಒಂದು ವೇಳೆ ಪೂರೈಕೆ ಪೂರ್ಣ ಸ್ಥಗಿತವಾದರೆ ಮೂರೂ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.