ಬೆಳಗಾವಿ[ಜೂ.29] : ಬೆಳಗಾವಿ- ಬೆಂಗಳೂರು ನಡುವೆ ಆರಂಭ​ಗೊ​ಳ್ಳ​ಲಿ​ರುವ ಹೊಸ ರೈಲು (ವಿಶೇಷ ಹೊಸ ರೈಲು ಸಂಖ್ಯೆ 06526ರ) ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಜೂ.29ರಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.

ರಾತ್ರಿ 9ಕ್ಕೆ ಬೆಳಗಾವಿ ಬಿಡುವ ಈ ರೈಲು ಬೆಳಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ. ಅದೇ ರೀತಿ ಬೆಂಗಳೂರನ್ನು ರಾತ್ರಿ 9ಗಂಟೆಗೆ ಬಿಡಲಿದ್ದು, ಬೆಳಗ್ಗೆ 7 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ನಿಲುಗಡೆ ಇದೆ.

ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಸರ್ಕಾರದ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಿಗಿಮಠ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಹಲವು ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಸುಮಾರು 17 ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದು, ಈ ಸಾಲಿಗೆ ಇನ್ನೊಂದು ಸೇರ್ಪಡೆಯಾಗುತ್ತಿದೆ.