ಬೆಳಗಾವಿ(ಮೇ.06): ಆಸ್ಪತ್ರೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್‌ ಸಿಲಿಂಡರ್‌ ಪೂರೈಕೆ ಆಗುತ್ತಿಲ್ಲ ಎಂಬ ಆರೋಪ ವಿವಿಧೆಡೆಯಿಂದ ಕೇಳಿಬರುತ್ತಿರುವ ನಡುವೆಯೇ ರಾಜ್ಯದಲ್ಲಿ ಮೊದಲ ಬಾರಿ ಕೋವ್ಯಾಕ್ಸಿನ್‌ ಟ್ರಯಲ್‌ ಆರಂಭಿಸಿದ್ದ ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಮತ್ತು ಸಮರ್ಪಕ ಔಷಧಗಳಿಲ್ಲದೆ ಪರದಾಡುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಕುರಿತು ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಜೀವನರೇಖಾ ಆಸ್ಪತ್ರೆಯ ವೈದ್ಯ ಡಾ.ಅಮಿತ್‌ ಭಾಟೆ, ಆಕ್ಸಿಜನ್‌ ಇಲ್ಲದೆ ರೋಗಿಯ ಸಂಬಂಧಿಕರಿಗೇ ಆಕ್ಸಿಜನ್‌ ಸಿಲಿಂಡರ್‌ ಹೊಂದಿಸುವಂತೆ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

50000 ಕೇಸ್‌, 346 ಬಲಿ: ರಾಜ್ಯದಲ್ಲಿ ಕೊರೋನಾ ತಾಂಡವ! ..

ಬೆಳಗಾವಿಯಲ್ಲಿ 4 ದಿನಗಳಿಂದ ಆಕ್ಸಿಜನ್‌ ಸರಾಸರಿ ಶೂನ್ಯವಾಗಿದ್ದು, ಔಷಧದ ಕೊರತೆಯೂ ಬಾಧಿಸುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಪ್ರಾಥಮಿಕ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಸ್ಯಾಚುರೇಷನ್‌ 80ಕ್ಕಿಂತ ಕಡಿಮೆ ಇದ್ದರೆ ಯಾರೂ ದಾಖಲು ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಮುಂಬರುವ 15 ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹದು. ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಬಹುದು. ಆ ಸಮಯದಲ್ಲಿ ಸಾವಿನ ಪ್ರಮಾಣ ನಿಯಂತ್ರಿಸಲು ಕಷ್ಟವಾಗಲಿದೆ. ಹೀಗಾಗಿ ಕೊರೋನಾ 2ನೇ ಅಲೆ ತನ್ನ ಹಂತಕ್ಕೆ ತಲುಪುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮೊದಲನೇ ಅಲೆಯಲ್ಲಿ ನಮಗೆ ಆಕ್ಸಿಜನ್‌, ರೆಮ್ ಡೆಸಿವಿರ್‌ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿತ್ತು. ಹೀಗಾಗಿ ರೋಗಿಗಳು ಬೇಗ ಗುಣಮುಖರಾಗುತ್ತಿದ್ದರು. ಇದೀಗ 2ನೇ ಅಲೆ ರೂಪಾಂತರ ಕೊರೋನಾ ವೈರಸ್‌ ಆಗಿದ್ದರಿಂದ ಗುಣಮುಖರಾದವರು ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 2ನೇ ಅಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಯುವಕರಲ್ಲಿಯೂ ಬಹಳಷ್ಟುಜನರಿಗೆ ಸೋಂಕು ದೃಢಪಡುತ್ತಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona