ಅಳ್ನಾ​ವರ[ಆ.13]: ಲಕ್ಷಾಂತರ ಮಂದಿ ಮನೆ-ಮಠ, ಆಸ್ತಿ-ಪಾಸ್ತಿ ಕಸಿದುಕೊಂಡಿರುವ ಪ್ರವಾಹ, ಬಡತನದಲ್ಲೂ ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಕನಸನ್ನು ಕಸಿದುಕೊಂಡಿದೆ.

ಎರಡು ದಿನ​ಗಳ ಹಿಂದೆ ಪಟ್ಟ​ಣ​ದಲ್ಲಿ ಬಂದ ನೆರೆ ಪ್ರವಾ​ಹ​ದಿಂದ ಧಾರವಾಡ ಜಿಲ್ಲೆ ಅಳ್ನಾ​ವರ ಪಟ್ಟ​ಣದ ಗೌರಮ್ಮ ಚಲ​ವಾದಿ ಎಂಬುವರ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ನೆರೆ ಇಳಿದ ನಂತರ ಮನೆಗೆ ವಾಪಸ್‌ ತೆರಳಿದ ಗೌರಮ್ಮಗೆ ಆಘಾತ ಎದುರಾಗಿತ್ತು, ಇಷ್ಟು ವರ್ಷ ಕಷ್ಟಪಟ್ಟು ಓದಿ ಪಡೆದಿದ್ದ ಬಿಎಸ್ಸಿ ಪ್ರಮಾಣಪತ್ರದ ಜತೆಗೆ .20 ಸಾವಿರಕ್ಕೂ ಅಧಿಕ ಮೌಲ್ಯದ ಪುಸ್ತಕಗಳು ನೀರು ಪಾಲಾಗಿದ್ದವು.

ಇದನ್ನು ಕಂಡು ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ಗೌರಮ್ಮಳಿಗೆ ಆಕಾಶವೇ ಕಳಚಿ ಬಿದ್ದಾಂತಾಗಿದೆ. ಗೌರಮ್ಮಳ ತಂದೆ ಗಜಾನನ ಚಲವಾದಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಐವರು ಹೆಣ್ಣು ಮಕ್ಕಳಲ್ಲಿ ಕೊನೆಯವರಾದ ಗೌರಮ್ಮ, ಸ್ನಾತಕೋತ್ತರ ಪದವಿ ಪೂರೈಸುವ ಕನಸು ಕಾಣುತ್ತಿದ್ದರು.