ಬೆಳಗಾವಿ ಆಸ್ತಿ ವಿಚಾರಕ್ಕೆ ತಮ್ಮನ ಮೇಲೆ ಟ್ರಾಕ್ಟರ್ ಹತ್ತಿಸಿ ಶಿವಪಾದಕ್ಕೆ ಸೇರಿಸಿದ ಅಣ್ಣ!
ಬೆಳಗಾವಿಯಲ್ಲಿ ಆಸ್ತಿ ವಿವಾದ ಮತ್ತು ನಿರಂತರ ಕಿರುಕುಳದಿಂದಾಗಿ ಸ್ವಂತ ಅಣ್ಣನೇ ತಮ್ಮನನ್ನು ಟ್ರ್ಯಾಕ್ಟರ್‌ನಿಂದ ಹರಿಸಿ ಕೊಲೆ ಮಾಡಿದ್ದಾನೆ. ಮದ್ಯಪಾನ ಮತ್ತು ಕಿರಿಕಿರಿಯಿಂದ ಬೇಸತ್ತ ಅಣ್ಣ ಈ ಕೃತ್ಯ ಎಸಗಿದ್ದಾನೆ.
ಬೆಳಗಾವಿ (ಡಿ.22): ಆಸ್ತಿ ವಿಚಾರಕ್ಕೆ ಹಾಗೂ ಸದಾ ಮದ್ಯಪಾನ ಮಾಡಿ ಬಂದು ಮನೆಯವರಿಗೆ ಕಿರುಕುಳ ನೀಡುತ್ತಿದ್ದ ಒಡಹುಟ್ಟಿದ ತಮ್ಮನನ್ನೇ ಸ್ವಂತ ಅಣ್ಣನೇ ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲಯಲ್ಲಿ ನಡೆದಿದೆ.
ಆಸ್ತಿವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಸಹೋದರನ ಭೀಕರ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಯರಗಟ್ಟಿಯ ಗೋಪಾಲ ಬಾವಿಹಾಳ (27) ಹತ್ಯೆಯಾದ ದುರ್ದೈವಿ. ಮಾರುತಿ ಬಾವಿಹಾಳ (30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ. ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ ಎಂದು ಗೋಪಾಲ ಕಿರಿಕಿರಿ ನೀಡುತ್ತಿದ್ದನು. ಅಲ್ಲದೇ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಪತ್ನಿ ಮನೆಯಲ್ಲಿ ಇರಿಸಿದ್ದ ಗೋಪಾಲ, ಅಣ್ಣಂದಿರಿಗೆ ಬಂದು ಕಿರಿಕಿರಿ ಮಾಡುತ್ತಿದ್ದನು. ಹೀಗಾಗಿ, ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲನ ಮೇಲೆ ಆತನ ಅಣ್ಣ ಮಾರುತಿ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದಾನೆ.
ಮೃತ ಗೋಪಾಲ ತಂದೆ ಅರ್ಜುನ್ ಬಾವಿಹಾಳಗೆ ಮೂವರು ಗಂಡು ಮಕ್ಕಳು ಇದ್ದಾರೆ. ಕಳೆದ 15 ದಿನಗಳ ಹಿಂದಷ್ಟೇ ಮೂವರೂ ಸಹೋದರರು ತಮಗೆ ಬಂದ ಜಮೀನನ್ನು ಹಾಗೂ ಜಮೀನಿಂದ ಬಂದಿದ್ದ ಹಣವಣನ್ನು ಪಾಲು ಮಾಡಿಕೊಂಡು ಬೇರೆ ಬೇರೆಯಾಗಿದ್ದರು. ಮೂವರು ಜನ ಸಹೋದರರಿಗೂ ಒಂದೊಂದು ಟ್ರಾಕ್ಟರ್ ಪಾಲು ಮಾಡಲಾಗಿತ್ತು. ಆದರೆ, ಇದರಲ್ಲಿ ಕಿರಿಯ ಸಹೋದರ ಗೋಪಾಲನಿಗೆ ಬಂದಿದ್ದ ಟ್ರಾಕ್ಟರ್ ಅನ್ನು ಹೆಂಡತಿ ಮನೆಯಲ್ಲಿ ಇಟ್ಟು ಬಂದು ಇಲ್ಲಿ ಅಣ್ಣಂದಿರೊಂದಿಗೆ ಗಲಾಟೆ ಮಾಡುತ್ತಿದ್ದನು.
ಇದನ್ನೂ ಓದಿ: ಆನ್‌ಲೈನ್ ಗೇಮ್ ಸಾಲ ತೀರಿಸಲು ದರೋಡೆ; ಮರ ಕತ್ತರಿಸುವ ಯಂತ್ರದಿಂದ ಅಡ್ಡ ಬಂದವರನ್ನು ಕತ್ತರಿಸಿದ ಇಬ್ರಾಹಿಂ!
ನನಗೆ ನಿಮ್ಮ ಟ್ರ್ಯಾಕ್ಟರ್ ಕೊಡಿ, ನಾನು ಕೆಲವರಿಗೆ ಟ್ರ್ಯಾಕ್ಟರ್ ಕೆಲಸಕ್ಕೆ ಕಳಿಸುವುದಾಗಿ ಮಾತು ಕೊಟ್ಟಿದ್ದೇನೆ, ಅವರಿಂದ ಹಣ ಪಡೆದಿದ್ದೇನೆ ಎಂದು ಅಣ್ಣಂದಿರೊಂದಿಗೆ ಗಲಾಟೆ ಮಾಡುತ್ತಿದ್ದನು. ಟ್ರ್ಯಾಕ್ಟರ್ ಅನ್ನು ಕೊಟ್ಟಿದ್ದಕ್ಕೆ ಹಣ ಕೇಳಿದರೆ, ತನ್ನ ಪಾಲಿಗೆ ಬಂದಿದ್ದ ಹಣವನ್ನು ನಾನು ಏನಾದರೂ ಮಾಡುತ್ತೇನೆ ಎಂದು ವಾದ ಮಾಡುತ್ತಿದ್ದನು. ವಿಪರೀತ ಕುಡಿತದ ದಾಸನಾಗಿದ್ದ ಗೋಪಾಲ ಮನೆಯವರಿಗೂ ಬೇಡವಾಗಿದ್ದನು. ಇದೀಗ ಟ್ರಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ಬೆಳಗ್ಗೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಗೋಪಾಲನ ಅಣ್ಣ ಮಾರುತಿ ತಮ್ಮನನ್ನು ಕೊಲೆ ಮಾಡುವುದಕ್ಕೆ ಹೊಂಚುಹಾಕಿದ್ದನು.
ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲ ಬೈಕ್‌ನಲ್ಲಿ ಬರುವಾಗ ಟ್ರಾಕ್ಟರ್‌ನಿಂದ ಡಿಕ್ಕಿ ಹೊಡೆಸಿದ್ದಾರೆ. ಈ ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲನ ಮೇಲೆ ಮನಬಂದಂತೆ ಟ್ರಾಕ್ಟರ್ ಹಾಯಿಸಿ ಹತ್ಯೆ ಮಾಡಿದ್ದಾನೆ. ಆಗ ಟ್ರಾಕ್ಟರ್ ಅಡಿಯಲ್ಲಿ ಗೋಪಾಲ ಸಿಲುಕಿ ನರಳಾಡಿ ಸಾಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ.
ಇದನ್ನೂ ಓದಿ: ಮಂತ್ರವಾದಿಯ ಮಾತು ಕೇಳಿ ತಾಯಿಯನ್ನೇ ಕೊಂದ ಮಗ; ಸಾಕ್ಷಿ ಬಿಚ್ಚಿಟ್ಟ ಮೂಳೆಗಳು!