ರಬಕವಿ-ಬನಹಟ್ಟಿಗೆ ವಲಸಿಗರಿಗೆ ಟಿಕೆಟ್ ನೀಡಿದ್ರೆ ಹುಷಾರ್!
ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಅಭ್ಯರ್ಥಿ ಬಿಟ್ಟು ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನಾವೆಲ್ಲ ಚುನಾವಣಾ ಚಟುವಟಿಕೆಗಳಿಂದ ದೂರ ಉಳಿಯುತ್ತೇವೆ ಎಂದು ರಬಕವಿ-ಬನಹಟ್ಟಿಭಾಗದ ಕಾರ್ಯಕರ್ತರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ರಬಕವಿ-ಬನಹಟ್ಟಿ :ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಅಭ್ಯರ್ಥಿ ಬಿಟ್ಟು ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನಾವೆಲ್ಲ ಚುನಾವಣಾ ಚಟುವಟಿಕೆಗಳಿಂದ ದೂರ ಉಳಿಯುತ್ತೇವೆ ಎಂದು ರಬಕವಿ-ಬನಹಟ್ಟಿಭಾಗದ ಕಾರ್ಯಕರ್ತರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಗೊಲಭಾವಿ ಗ್ರಾಮದಲ್ಲಿ ಸಭೆ ನಡೆಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಸಂಬಂಧ ಗಂಭೀರ ಚರ್ಚೆ ನಡೆಸಿ ಹೈಕಮಾಂಡ್‌ಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ. ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದನ್ನು ವಿರೋಧಿಸುತ್ತೇವೆ. ನಾವ್ಯಾರು ಚುನಾವಣೆ ಪ್ರಕ್ರಿಯೆಗಳಲ್ಲಿ ತೊಡಗುವುದಿಲ್ಲ ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಸಂಜು ರೆಡ್ಡಿ ಮತ್ತು ಸುರೇಶ ಗೌಡ ಪಾಟೀಲ ಮಾತನಾಡಿ, ಒಂದೂವರೆ ದಶಕದಿಂದಲೂ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಅಲವತ್ತುಕೊಂಡರೂ ಹೈಕಮಾಂಡ್ ನಮ್ಮ ಭಾವನೆಗೆ ಸ್ಪಂದಿಸಿಲ್ಲ. ಹೀಗಾಗಿ ಈ ಬಾರಿ ನಮ್ಮ ಹಕ್ಕೊತ್ತಾಯ ಮಂಡನೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಹೆಸರಾಂತ ವೈದ್ಯರು ಆಕಾಂಕ್ಷಿಯಾಗಿ ಕಣಕ್ಕಿಳಿಯಲು ಸಿದ್ಧರಿದ್ದರೂ ಹೊರಗಿನ ಅಭ್ಯರ್ಥಿಗೆ ಆದ್ಯತೆ ನೀಡುವುದು ಸರಿಯಲ್ಲ. ವಲಸಿಗರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಖಂಡಿತ ನೆಲ ಕಚ್ಚಲಿದೆ ಎಂಬುದನ್ನು ವರಿಷ್ಠರು ಗಮನಿಸಬೇಕು ಎಂದು ಪ್ರಮುಖ ಕಾರ್ಯಕರ್ತರು ಅಭಿಪ್ರಾಯ ಹಂಚಿಕೊಂಡರು.
ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಮತ್ತೆ ಗತವೈಭವ ಮರುಕಳಿಸಬೇಕಾದರೆ ಸ್ಥಳೀಯ ಅಭ್ಯರ್ಥಿಯೇ ಸೂಕ್ತ. ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಸಿಗಲು ಸಾಧ್ಯ. ವಲಸಿಗ ಅಭ್ಯರ್ಥಿಯಾದರೆ ಕ್ಷೇತ್ರದ ಜನರ ಕಷ್ಟಕೇಳುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮಲ್ಲಪ್ಪ ಯರಗುದ್ರಿ, ಭೀಮಶಿ ಸೋರಗಾಂವಿ, ಮಲ್ಲಪ್ಪ ಕರಿಗಾರ, ಭರಮಪ್ಪ ಕರಿಗಾರ, ಬಸಪ್ಪ ದೇವಪ್ಪಗೋಳ, ಬೀರಪ್ಪ ಕರಿಗಾರ, ಈರಪ್ಪ ಹಾಂವನವರ, ಬಸಪ್ಪ ಮುಗಳಖೋಡ, ರಮೇಶ ಗೌಂಡಿ, ಹನಗಂಡಿ ಗ್ರಾಮದ ಇಬ್ರಾಹಿಂ ಅಲಾಸ, ವಿಠಲ ನಾರವಗೋಳ, ನಿಂಗಪ್ಪ ದನ್ನಿ, ಬೀರಪ್ಪ ದುಗಪ್ಪಗೋಳ, ಬಾಳಪ್ಪ ಪುಡಿ, ಮಾರುತಿ ದನ್ನೇನವರ, ಶಾನೂರ ರಾಮಗುರ್ಗ, ಶಬ್ಬೀರ ಅಲ್ತಾಪ, ರಾಜಶೇಖರ ಗುಬಚಿ, ದಸ್ತಗೀರಸಾಬ್ ದಿಗ್ಗೇವಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಡಾ.ಬೆಳಗಲಿಗೆ ನೀಡಿದರೆ ಗೆಲ್ಲಿಸುತ್ತೇವೆ
ರಬಕವಿ-ಬನಹಟ್ಟಿಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ, ಬಹುಸಂಖ್ಯಾತರಿರುವ ಪಂಚಮಸಾಲಿ ಮತ್ತು ನೇಕಾರ ಸಮುದಾಯಗಳ ಬೆಂಬಲವಿರುವ ಖ್ಯಾತ ಸರ್ಜನ್ ಡಾ.ಎ.ಆರ್.ಬೆಳಗಲಿ ಅವರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಿದಲ್ಲಿ ಎಲ್ಲ ಕಾರ್ಯಕರ್ತರೂ ಒಗ್ಗಟ್ಟಾಗಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಸಂಕಲ್ಪ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಈ ಪ್ರಮುಖ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.
ಬಿಸಿ ತುಪ್ಪವಾದ ಎರಡನೇ ಪಟ್ಟಿ
ಬೆಂಗಳೂರು (ಏ.1): ಕಾಂಗ್ರೆಸ್ ಎರಡನೇ ಪಟ್ಟಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಸುಮಾರು 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಇಬ್ಬರು ಅಭ್ಯರ್ಥಿಗಳ ನಡುವೆ ಫೈಟ್ ಶುರುವಾಗಿದೆ. ಆದರೆ ನವಲಗುಂದ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ನಡುವೆ ಒಗ್ಗಟ್ಟು ಪ್ರದರ್ಶನ ಕಂಡಿದೆ. ನವಲಗುಂದ ಕ್ಷೇತ್ರದ ಆಕಾಂಕ್ಷಿಗಳಾದ ಕೋನರೆಡ್ಡಿ ಹಾಗೂ ಆನಂದ್ ಅಸೂಟಿ ನಡುವೆ ಒಗ್ಗಟ್ಟು ಮೂಡಿದೆ. ಸಿದ್ದರಾಮಯ್ಯ ಭೇಟಿಯಾಗಿ ಇಬ್ಬರೂ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಬ್ಬರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಒಟ್ಟಿಗೆ ಕೆಲಸ ಮಾಡುವ ವಾಗ್ದಾನ ನೀಡಿದ್ದಾರೆ. ಬಿಜೆಪಿ ಸೋಲಿಸುವುದು ನಮ್ಮ ಮೊದಲ ಗುರಿ. ಹೀಗಾಗಿ ನಾವೇ ಕಿತ್ತಾಡಿಕೊಂಡರೆ ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ ನೀವೂ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಿಗರ ಕೆಲಸ ಮಾಡುತ್ತೇವೆ ಎಂದು ಇಬ್ಬರು ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸುರ್ಜೆವಾಲಾ ಸಿದ್ದರಾಮಯ್ಯ ಪ್ರತ್ಯೇಕ ಮಾತುಕತೆ: ಇನ್ನು ಟಿಕೆಟ್ ಹಂಚಿಕೆ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುಪ್ತವಾಗಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಕೋಲಾರಕ್ಕೆ ತೆರಳುವ ವೇಳೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಬೇರೆ ನಾಯಕರನ್ನು ಬಿಟ್ಟು ಒಂದೇ ಕಾರಿನಲ್ಲಿ ಸುರ್ಜೆವಾಲಾ ಹಾಗೂ ಸಿದ್ದರಾಮಯ್ಯ ತೆರಳಿದ್ದಾರೆ.
ಇನ್ನು ರಾಹುಲ್ ಗಾಂಧಿ ಕೋಲಾರಕ್ಕೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಹುಲ್ ಗಾಂಧಿಯವರು 9 ನೇ ತಾರೀಖು ಕೋಲಾರಕ್ಕೆ ಬರುತ್ತಾರೆ. 5 ನೇ ತಾರೀಖು ಇದ್ದ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಅವರಿಗೆ ಬೇರೆ ಕೆಲಸ ಇದೆ , ಅಂದು ಬರೋದಕ್ಕೆ ಆಗಲ್ಲ ಆದರಿಂದ ಕ್ಯಾನ್ಸಲ್ ಆಗಿದೆ. ಕೋಲಾರದಲ್ಲಿ ಬೃಹತ್ ರ್ಯಾಲಿಯನ್ನ ಏರ್ಪಡಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ದೆಹಲಿಗೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ದೆಹಲಿಗೆ ಯಾವಾಗ ಕರಿಯುತ್ತಾರೋ ಆಗ ಹೋಗ್ತೀನಿ ಎಂದಿದ್ದಾರೆ.