ಬೆಂಗಳೂರು [ಜು.19] :  ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ 30 ಲಕ್ಷ ರು. ಪಡೆದು ವಂಚಿಸಿದ್ದ ರೈಸ್‌ ಫುಲ್ಲಿಂಗ್‌ ದಂಧೆಕೋರನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆ ನಿವಾಸಿ ಶಿವಕುಮಾರ್‌ ಅಲಿಯಾಸ್‌ ಕುಮಾರಸ್ವಾಮಿ ಬಂಧಿತನಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕೆಲ ದಿನಗಳಿಂದ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಕೆಂಗೇರಿ ಮತ್ತು ತಲಘಟ್ಟಪುರದಲ್ಲಿ ಇಬ್ಬರಿಗೆ ಆರೋಪಿಗಳು ಮೋಸ ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಸಂಖ್ಯೆಗಳ ಮಾಹಿತಿ ಆಧರಿಸಿ ಶಿವಕುಮಾರ್‌ನನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ತಲಘಟ್ಟಪುರದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿದ್ದ ಶಿವಕುಮಾರ್‌, ‘ನೀವು ರೈಸ್‌ ಫುಲ್ಲಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಸಿಗಲಿದೆ ಎಂದು ಆಮಿಷವೊಡ್ಡಿದ್ದ. ಈ ಮಾತು ನಂಬಿದ ಅವರು, ಹಂತ ಹಂತವಾಗಿ .18 ಲಕ್ಷ ಆರೋಪಿಗಳಿಗೆ ನೀಡಿದ್ದರು. ಈ ಹಣ ಸಂದಾಯವಾದ ಬಳಿಕ ಶಿವಕುಮಾರ್‌ ನಾಪತ್ತೆಯಾಗಿದ್ದ. ಆತನ ನಡವಳಿಕೆ ಮೇಲೆ ಅನುಮಾನಗೊಂಡ ನಿವೃತ್ತ ಅಧಿಕಾರಿ, ಆರೋಪಿ ಮನೆ ಬಳಿ ಹೋಗಿ ವಿಚಾರಿಸಿದಾಗ ಬೆದರಿಸಿ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಕೆಂಗೇರಿ ಉಪನಗರದ ಸಮೀಪದ ಬಂಡೆಮಠದ ನಿವಾಸಿಯೊಬ್ಬರಿಂದ 12 ಲಕ್ಷ ರು. ಸುಲಿಗೆ ಮಾಡಿ ಶಿವಕುಮಾರ್‌ ಗ್ಯಾಂಗ್‌ ಟೋಪಿ ಹಾಕಿತ್ತು. ಆರೋಪಿ ಶಿವಕುಮಾರ್‌ ಮಾತಿಗೆ ಮರುಳಾಗಿ ಸಂತ್ರಸ್ತರು, ತಮ್ಮ ಪತ್ನಿ ಹೆಸರಿನಲ್ಲಿದ್ದ ನಿವೇಶನ ಮಾರಾಟ ಮಾಡಿ ಹಣ ಕೊಟ್ಟಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.