ಕೊರೋನಾ ಎರಡನೇ ಅಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಕೊರೋನಾದಿಂದ ಜಗತ್ತು ಕಂಗಾಲಗಿದ್ದು ಎಚ್ಚೆತ್ತುಕೊಳ್ಳದಿದ್ದರೆ. ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ. 

ಬೇಲೂರು (ಏ.26): ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಿವಿಲ್‌ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ನಾಗೇಶ್‌ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ತಾಲೂಕು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೋವೀಡ್‌ ಸೋಂಕು ನಿಯಂತ್ರಣ ಮತ್ತು ಲಸಿಕೆ ಅಭಿಯಾನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

14 ದಿನ ಕರ್ನಾಟಕ ಲಾಕ್‌ಡೌನ್: ಸಿಎಂ ಘೋಷಣೆ, ಎಂದಿನಿಂದ? ...

ದೇಶದಲ್ಲಿ ಎರಡನೇ ಅಲೆ ಶುರುವಾಗಿದ್ದು, ಸದ್ಯಕ್ಕೆ ನಿಯಂತ್ರಣಕ್ಕೆ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಠಿಣ ಕಾರ್ಯತಂತ್ರ ಪಾಲಿಸುವ ಭರವಸೆ ನೀಡಿದ್ದು, ಈ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಅದಕ್ಕಾಗಿ 45 ವರ್ಷಕ್ಕೆ ಮೇಲ್ಪಟ್ಟವಯಸ್ಸಿನವರು ಕೋವಿಡ್‌ ಶೀಲ್ಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಮುಂದೆ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಬಹುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶಿಸಿದ್ದು ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದಾಗಿದೆ ಎಂದರು.

ಹೆಚ್ಚು ಸಾವು-ನೋವು: ಮೊದಲನೆ ಅಲೆಯಿಂದಾಗಿ ಸಾಕಷ್ಟು ಪ್ರಾಣಹಾನಿಯಾಗಿತ್ತು. ಆದರೆ ಎರಡನೇ ಅಲೆ ಮತ್ತಷ್ಟು ಜೋರಾಗಿ ಅತಿ ಹೆಚ್ಚು ಸಾವು ನೋವು ಸಂಭವಿಸುತ್ತಿದೆ. ಅದರಲ್ಲೂ ಮಕ್ಕಳ ಮೇಲೆ ಬೇಗನೆ ಈ ಸೋಂಕು ಹರಡುತ್ತಿರುವುದು ಆತಂಕ ತಂದಿದೆ. ಹಾಗೆಯೇ ಜನರೂ ಇದರ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವುದು ಸರಿಯಲ್ಲ ಎಂದರು.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ವಕೀಲರ ಸಂಘದ ಅಧ್ಯಕ್ಷ ಹೆಚ್‌.ಆರ್‌.ಚಂದ್ರು ಮಾತನಾಡಿ, ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶ ಕೋವಿಡ್‌ ವ್ಯಾಕ್ಸಿನ್‌ ವಿಚಾರದಲ್ಲಿ ಬಹಳಷ್ಟುಮುಂದಿದೆ. ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕಾಗಿದೆ. ಲಸಿಕಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಇದರ ಬಗ್ಗೆ ಗ್ರಾಮೀಣ ಭಾಗ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾಹನದಲ್ಲಿ ಪ್ರಚಾರ ಮಾಡಿಸಬೇಕು. ಯಾವುದೇ ರೋಗ ಲಕ್ಷಣ ಬಂದರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಶ್ರೀಕಾಂತ್‌ ಮಾತನಾಡಿ, ಕೋವಿಡ್‌ ಎರಡನೇ ಅಲೆಯಿಂದ ಸಾವು, ನೋವುಗಳು ಉಂಟಾಗುತ್ತಿರುವುದು ವಿಷಾದನೀಯ. ಈ ಸಂದರ್ಭದಲ್ಲಿ ಜನರೂ ಕೂಡ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಗುಂಪುಗುಂಪಾಗಿ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಮಾಸ್ಕ್‌ ಕೂಡ ಹಾಕುತ್ತಿಲ್ಲ. ಪ್ರಜ್ಞಾವಂತ ನಾಗರಿಕರೇ ಈ ರೀತಿ ಮಾಡಿದರೆ ಜನಸಾಮಾನ್ಯರ ಕಥೆ ಏನು. ಅದಕ್ಕಾಗಿ ನಾವು ಮುಂಜಾಗ್ರತಾ ಕ್ರಮವಾಗಿ ಕೋವಿಡ್‌ ನಿಯಮಾವಳಿಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.