ಬೆಂಗಳೂರು :  ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌- ಜೆಡಿಎಸ್‌ಗೆ ಮೇ 29ರಂದು ಬಿಬಿಎಂಪಿಯ ಎರಡು ವಾರ್ಡುಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿಯೂ ಬಂಡಾಯದ ಬಿಸಿ ಎದುರಾಗಿದೆ.

ಕಾವೇರಿಪುರ ಹಾಗೂ ಸಗಾಯಪುರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಗೆ ಬಂಡಾಯ ಎದುರಾಗಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಗಣಮಿಸಿದೆ. ಮೈತ್ರಿ ಧರ್ಮದಂತೆ ತಲಾ ಒಂದು ವಾರ್ಡನ್ನು ಕಾಂಗ್ರೆಸ್‌- ಜೆಡಿಎಸ್‌ ಹಂಚಿಕೊಂಡಿವೆ. ಆದರೆ, ಎರಡೂ ವಾರ್ಡ್‌ಗಳಲ್ಲಿ ಜೆಡಿಎಸ್‌ ಪಕ್ಷದ ಸದಸ್ಯರೇ ಮೈತ್ರಿಗೆ ತಲೆನೋವಾಗಿ ಪರಿಗಣಿಸಿದ್ದಾರೆ.

ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಪಳಿನಿಯಮ್ಮಾಳ್‌ ಸ್ಪರ್ಧಿಸಿದ್ದು, ಬಿಜೆಪಿಯಿಂದ ಜೇಯೇರೀಮ್‌ ಕಣದಲ್ಲಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾರಿಮುತ್ತು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಮುಳುವಾಗಿದೆ. ಇನ್ನು ಕಾವೇರಿಪುರ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸುಶೀಲಾ ಅವರು ಸ್ಪರ್ಧಿಸಿದ್ದಾರೆ. 

ಆದರೆ, ಹಿಂದೆ ಜೆಡಿಎಸ್‌ನಿಂದ ಪಾಲಿಕೆ ಸದಸ್ಯೆಯಾಗಿದ್ದ ರಮೀಳಾ ಉಮಾಶಂಕರ್‌ ಅವರ ಕುಟುಂಬದವರಿಗೆ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ರಮೀಳಾ ಅವರ ಪತಿ ಉಮಾಶಂಕರ್‌ ಅಸಮಾಧಾನಗೊಂಡಿದ್ದಾರೆ. ಪರಿಣಾಮ ಎರಡು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಿಗೆ ಬಂಡಾಯ ಬಿಸಿ ಎದುರಾಗಲಿದ್ದು, ಅದರ ಲಾಭ ಪಡೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.