ಈ ವರ್ಷ ಬಿಬಿಎಂಪಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲಾಗುವುದು. ಇವು ಆಟೋ, ಬೈಸಿಕಲ್, ಬೈಕ್ ಹಾಗೂ ಸಾಂಪ್ರದಾಯಿಕ ತಳ್ಳುವ ಗಾಡಿ ಮಾದರಿಯಲ್ಲಿ ಇರಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಬೆಂಗಳೂರು (ಮಾ.25): ಈ ವರ್ಷ ಬಿಬಿಎಂಪಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲಾಗುವುದು. ಇವು ಆಟೋ, ಬೈಸಿಕಲ್, ಬೈಕ್ ಹಾಗೂ ಸಾಂಪ್ರದಾಯಿಕ ತಳ್ಳುವ ಗಾಡಿ ಮಾದರಿಯಲ್ಲಿ ಇರಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಅವರು ಸೋಮವಾರ ನಗರದ ಶಾಸಕರ ಜತೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆಬದಿ ಮಳಿಗೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ. ಪ್ರಸ್ತುತ ಸುಮಾರು 3,778 ಜನ ತಳ್ಳುವ ಗಾಡಿ ಬೇಕೆಂದು ಪಾಲಿಕೆಗೆ ಅರ್ಜಿ ಹಾಕಿದ್ದಾರೆ. ಈ ವರ್ಷ 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲು ತಯಾರಿದ್ದೇವೆ. ಗಾಡಿ ಬೇಕಾದವರು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ನೋಂದಣಿ ಮಾಡಿಸಿಕೊಂಡವರ ಪೈಕಿ ಶೇಕಡವಾರು ಪ್ರಮಾಣದಲ್ಲಿ ಈ ಸೌಲಭ್ಯ ನೀಡಲಾಗುವುದು. ನಾಲ್ಕೂ ಮಾದರಿಯ ತಳ್ಳುವ ಗಾಡಿಗಳನ್ನು ತಯಾರಿಸಲು ಟೆಂಡರ್‌ ಸಹ ಕರೆಯಲಾಗುವುದು ಎಂದು ತಿಳಿಸಿದರು.

ಸಂವಿಧಾನ ಬದಲಾವಣೆ ಬಗ್ಗೆ ನಾನು ಹೇಳಿಕೆ ನೀಡಿಲ್ಲ: ಡಿ.ಕೆ.ಶಿವಕುಮಾರ್‌

ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಹಾಕಲು ಅರ್ಹರಲ್ಲ. ಪ್ರತಿ ಬೀದಿಬದಿ ವ್ಯಾಪಾರಿಗಳ ಲೆಕ್ಕಾಚಾರ ಪಾಲಿಕೆ ಬಳಿ ಇರಬೇಕು. ಪೊಲೀಸರು, ಅಧಿಕಾರಿಗಳು, ಗೂಂಡಾಗಳು ತೊಂದರೆ ಕೊಡುತ್ತಾರೆ ಎನ್ನುವ ದೂರುಗಳನ್ನು ತಪ್ಪಿಸಲು ಈ ವ್ಯವಸ್ಥೆ ತರಲಾಗುತ್ತಿದೆ. ಒಂದು ಕುಟುಂಬಕ್ಕೆ ಒಂದೇ ಗಾಡಿ ನೀಡಲಾಗುವುದು. ಪ್ರತಿದಿನ ಯಾವ ಜಾಗದಲ್ಲಿ ವ್ಯಾಪಾರ ನಡೆಸಲಾಯಿತು ಎನ್ನುವ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳಬೇಕು, ಮತ್ತೊಬ್ಬರಿಗೆ ಮಾರುವುದಕ್ಕೆ ಅವಕಾಶವಿಲ್ಲ ಎಂದರು.

ನೋಂದಣಿಯಾಗದ ವ್ಯಾಪಾರಿಗಳ ತೆರವು: ಬಿಬಿಎಂಪಿಯಲ್ಲಿ ಇದುವರೆಗೂ 27,565 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಏಪ್ರಿಲ್ ಕೊನೆಯವರೆಗೆ ಅವಧಿ ವಿಸ್ತರಿಸಲಾಗುವುದು. ಆ ನಂತರವೂ ನೋಂದಾಯಿಸದ ವ್ಯಾಪಾರಿಗಳನ್ನು ಗಡುವು ಮುಗಿದ ಬಳಿಕ ತೆರವುಗೊಳಿಸಲಾಗುವುದು ಎಂದು ಇದೇ ವೇಳೆ ಉಪಮುಖ್ಯಮಂತ್ರಿ ತಿಳಿಸಿದರು.ಶಾಸಕರ ಬೇಡಿಕೆ, ಸಲಹೆ

ಗಮನಿಸಿಕೊಂಡು ಬಜೆಟ್‌: ಬಿಬಿಎಂಪಿ ಬಜೆಟ್‌ ಕುರಿತು ನಗರದ ಶಾಸಕರು, ಸಚಿವರು ಚರ್ಚೆ ನಡೆಸಿ ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ವಿಚಾರವಾಗಿ ಶೇ.50ರಷ್ಟು ಗುಂಪು ಮನೆಗಳು ಮತ್ತು ಶೇ.50ರಷ್ಟು ಒಂಟಿ ಮನೆಗಳನ್ನು ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ನಗರದ ಶಾಸಕರು ಸಲಹೆ ನೀಡಿದ್ದಾರೆ. ತಮ್ಮ ಕ್ಷೇತ್ರಗಳ ಬೇಡಿಕೆಗಳು, ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಬಜೆಟ್ ತಯಾರಿಸಲಾಗುವುದು. ಬಿಬಿಎಂಪಿ ಆಡಳಿತಾಧಿಕಾರಿಗಳು ಸಮಯ ನೋಡಿ ವಾಸ್ತವವಾಗಿ ಎಷ್ಟು ಗಾತ್ರದ ಬಜೆಟ್ ಅನ್ನು ಮಂಡಿಸಲು ಸಾಧ್ಯವೋ ಅದನ್ನು ಮಂಡಿಸುತ್ತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡುತ್ತಿರುವ ಅನುದಾನವನ್ನು ₹7 ಸಾವಿರ ಕೋಟಿಗಳಿಗೆ ಹೆಚ್ಚಳ ಮಾಡಿದ್ದಾರೆ. ನಗರಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಡಬಲ್ ಡೆಕ್ಕರ್, ಮೆಟ್ರೋ, ಮೇಲ್ಸೇತುವೆ, ಸುರಂಗ ರಸ್ತೆಗೆ ಹಣ ಕೊಟ್ಟಿದ್ದಾರೆ. ಇಷ್ಟು ದಿನ ಯಾವುದೇ ಸರ್ಕಾರವೂ ಬೆಂಗಳೂರಿಗೆ ಇಷ್ಟು ಹೆಚ್ಚಿನ ಅನುದಾನ ನೀಡಿರಲಿಲ್ಲ. ಈಗ ಬೆಂಗಳೂರಿಗೆ ಅತಿಹೆಚ್ಚು ಅನುದಾನ ನೀಡಿದೆ. ಎಫ್ಎಆರ್, ಜಾಹೀರಾತಿನಿಂದ ಪಾಲಿಕೆಗೆ ಆದಾಯ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು. ನ್ಯಾಯಾಲಯ ಜಾಹೀರಾತು ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ ಇದರಿಂದ ನಿರೀಕ್ಷಿತ ಆದಾಯ ಕಷ್ಟಸಾಧ್ಯ. ನ್ಯಾಯಾಲಯ ಈ ಹಿಂದೆ ಎರಡು- ಮೂರು ವಿಚಾರದಲ್ಲಿ ಹೀಗೆ ಮಧ್ಯಪ್ರವೇಶ ಮಾಡಿದ ಕಾರಣ ನಾವು ಜಾಗೃತರಾಗಿ ಬಜೆಟ್ ಮಂಡಿಸಬೇಕಾಗುತ್ತದೆ ಎಂದರು.

ಸ್ಮಾರ್ಟ್‌ಮೀಟರ್‌ ಶುಲ್ಕ ಹೆಚ್ಚಳಕ್ಕೆ ಆರ್‌ಡಿಎಸ್‌ಎಸ್‌ ನಿಯಮ ಕಾರಣ: ಗೌರವ್‌ ಗುಪ್ತಾ ಸ್ಪಷ್ಟನೆ

ಶಾಸಕರ ಅಮಾನತು ನನಗೆ ಸಂಬಂಧಿಸಿದ್ದಲ್ಲ: ಬಿಬಿಎಂಪಿ ಬಜೆಟ್‌ ಕುರಿತ ಸಭೆಯನ್ನು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಡಾ। ಅಶ್ವತ್ಥ ನಾರಾಯಣ ಅವರ ಬಳಿ ಚರ್ಚೆ ಮಾಡಿಯೇ ದಿನಾಂಕ ನಿಗದಿ ಮಾಡಿದ್ದೆ. ಆದರೆ, ರಾಜಕೀಯ ಕಾರಣಕ್ಕೆ ಪ್ರತಿಪಕ್ಷದವರು ಸಭೆಗೆ ಗೈರು ಹಾಜರಾಗಿದ್ದಾರೆ. ಸದನದಿಂದ ಅಮಾನತು ಆದೇಶವನ್ನು ಹಿಂಪಡೆಯಿರಿ ಎಂದು ಅನೇಕ ಬಿಜೆಪಿ ಶಾಸಕರು ಬಿಬಿಎಂಪಿ ಬಜೆಟ್ ಸಭೆಗೆ ಗೈರಾಗಿದ್ದಾರೆ. ಇದು ನನಗೆ ಸಂಬಂಧಪಟ್ಟ ವಿಚಾರವಲ್ಲ. ಸಭಾಧ್ಯಕ್ಷರು ಹಾಗೂ ನೀವುಂಟು ಎಂದು ಹೇಳಿದ್ದೇನೆ.