ಬೆಂಗಳೂರು (ಡಿ.25):  ಬಿಬಿಎಂಪಿಯ 12 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಹಗ್ಗಜಗ್ಗಾಟ ಜೋರಾಗಿದೆ.

ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಡಿ.30 ರಂದು ಚುನಾವಣೆ ನಡೆಸುವ ಸಂಬಂಧ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ .

ದಿನಾಂಕ ಸಮೀಪಿಸುತ್ತಿದ್ದಂತೆ ಬಿಬಿಎಂಪಿ ಬಿಜೆಪಿ ಸದಸ್ಯರು ಹಾಗೂ ಕಳೆದ ಉಪ ಚುನಾವಣೆ, ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಯಲ್ಲಿ ಬೆಂಬಲ ನೀಡಿದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರ ನಡುವೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಆರಂಭವಾಗಿದೆ.

ಈ ಹಿಂದೆ ಎರಡು ಬಾರಿ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್‌ನ ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ, ಬಿಟಿಎಂ ಬಡಾವಣೆ ವಾರ್ಡ್‌ನ ಕೆ.ದೇವದಾಸ್‌ ಹಾಗೂ ಮಾರತ್‌ಹಳ್ಳಿ ವಾರ್ಡ್‌ನ ಎನ್‌. ರಮೇಶ್‌ ಅವರಿಗೆ ಮಾತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಬಿಜೆಪಿ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.

ಆದರೆ, ಮಹಾಲಕ್ಷ್ಮೇಲೇಔಟ್‌, ಶಿವಾಜಿನಗರ, ಕೆ.ಆರ್‌.ಪುರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಕೆ ಸದಸ್ಯರಿಗೆ ಈ ಬಾರಿ ಯಾವುದೇ ಅಧ್ಯಕ್ಷ ಸ್ಥಾನ ನೀಡಬಾರದು, ಈ ಸದಸ್ಯರನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ, ಪಕ್ಷದ ಸದಸ್ಯತ್ವಕ್ಕೆ ಅವರು ಈವರೆಗೆ ರಾಜೀನಾಮೆ ನೀಡಿಲ್ಲ. ತಾಂತ್ರಿಕ ಸಮಸ್ಯೆ ಉಂಟಾಗುವ ಹಿನ್ನೆಲೆಯಲ್ಲಿ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12ರಲ್ಲಿ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕ್ರಮವಾಗಿ ಮಂಜುಳಾ ನಾರಾಯಣಸ್ವಾಮಿ, ಎನ್‌.ರಮೇಶ್‌ ಹಾಗೂ ದೇವದಾಸ್‌ ಅವರ ಪಾಲಾಗಲಿದೆ. ಉಳಿದ ಒಂಬತ್ತು ಸ್ಥಾಯಿ ಸಮಿತಿಗಳಲ್ಲಿ ತಲಾ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರ ಅವರ ವಿಧಾನಸಭಾ ಕ್ಷೇತ್ರಕ್ಕೆ ನೀಡುವಂತೆ ಒತ್ತಡ ಕೇಳಿ ಬರುತ್ತಿದೆ. ಉಳಿದಂತೆ ಲಕ್ಕಸಂದ್ರ ವಾರ್ಡ್‌ನ ಸರಳಾ ಮಹೇಶ್‌, ರಾಯಪುರ ವಾರ್ಡ್‌ನ ಶಶಿಕಲಾ, ಕತ್ರಿಗುಪ್ಪೆಯ ಸಂಗಾತಿ ವೆಂಕಟೇಶ್‌, ಜೆ.ಪಿ ಉದ್ಯಾನವನ ವಾರ್ಡ್‌ ಮಮತಾ ವಾಸುದೇವ್‌ ಅವರುಗಳಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮೇಯರ್‌, ಉಪ ಮೇಯರ್‌ ಹಾಗೂ ಆಡಳಿತ ಪಕ್ಷ ನಾಯಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಾವುದೇ ವಾರ್ಡ್‌ ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬಾರದು ಎಂದು ಬಿಜೆಪಿ ತೀರ್ಮಾನಿಸಿದೆ. ಆದರೆ, ಅಂತಿಮ ಚಿತ್ರಣ ಡಿ.30ರಂದು ಹೊರ ಬೀಳಲಿದೆ.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಡಿ.29ರಂದು ನಗರದ ಬಿಜೆಪಿ ಶಾಸಕರು ಸಭೆ ಮಾಡಿ ತೀರ್ಮಾನಿಸಲಿದ್ದಾರೆ.

- ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕ