ಬೆಂಗಳೂರು [ಡಿ.19]:  ಕನ್ನಡ ನಾಮಫಲಕ ಅಳವಡಿಸುವಂತೆ ನೋಟಿಸ್‌ ಜಾರಿ ಮಾಡಿದರೂ ಕನ್ನಡ ನಾಮಫಲಕ ಅಳವಡಿಸದ ಉದ್ದಿಮೆಗಳ ನಾಮಫಲಕಗಳನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.

ಪ್ರಮುಖವಾಗಿ ಜಯನಗರ ಮಾರುಕಟ್ಟೆ, ವಿಜಯನಗರ, ಬಸವನಗುಡಿ, ಚಿಕ್ಕಪೇಟೆ, ಕೋರಮಂಗಲ, ಜಯನಗರ, ಪದ್ಮನಾಭನಗರ, ರಾಜಾಜಿನಗರದ ಓರೆಯನ್‌ ಮಾಲ್‌ ಸೇರಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸಲಾಯಿತು. ಈ ಪೈಕಿ ಒಟ್ಟು 207 ಮಳಿಗೆಗಳ ಅನ್ಯಭಾಷೆಯ ನಾಮಫಲಕ ತೆರವು ಮಾಡಲಾಯಿತು.

ವ್ಯಾಪಾರಿಗಳೊಂದಿಗೆ ವಾಗ್ವಾದ:

ಜಯನಗರದಲ್ಲಿ ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ ನಾಮಫಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಅನ್ಯ ಭಾಷೆಯ ನಾಮಫಲಕ ತೆರವು ಮಾಡದಂತೆ ವ್ಯಾಪಾರಿಗಳು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಒಂದು ನಾಮಫಲಕ ಮಾಡಿಸುವುದಕ್ಕೆ .50 ಸಾವಿರ ಬೇಕು. ಕನ್ನಡ ನಾಮಫಲಕ ಅಳವಡಿಕೆಗೆ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.

ಇನ್ನು ರಾಜಾಜಿನಗರ ಓರೆಯನ್‌ ಮಾಲ್‌ನಲ್ಲಿ ಆರೋಗ್ಯಾಧಿಕಾರಿ ಬಾಲಚಂದ್ರ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ಮಾಲ್‌ನ ನೆಲ ಮಹಡಿಯ 30 ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಂಡಿದ್ದರು. ಉಳಿದ ಮಳಿಗೆಗಳಲ್ಲಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿದ್ದವು. ಫಲಕಗಳನ್ನು ಸ್ಟಿಕರ್‌ಗಳಿಂದ ಗೋಡೆಗೆ ಅಂಟಿಸಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರದೊಳಗೆ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಕೆ ಮಾಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರಗಳಲ್ಲಿ ಶುರುವಾಯ್ತು 21 ಹೊಸ ಆಧಾರ್ ಕೇಂದ್ರ; ಸೇವೆ & ಶುಲ್ಕ ಕಂಪ್ಲೀಟ್ ಡೀಟೆಲ್ಸ್...

ನಾಮಫಲಕ ತೆರವು ಕಾರ್ಯಾಚರಣೆ ವಿವರ

ಸ್ಥಳ ನೋಟಿಸ್‌ ನೀಡಿರುವ ಉದ್ದಿಮೆ ನಾಮಫಲಕ ತೆರವು

ಜಯನಗರ 118 58

ವಿಜಯನಗರ 133 17

ಪದ್ಮನಾಭನಗರ 55 30

ಬಿಟಿಎಂ ಲೇಔಟ್‌ 60 18

ಚಿಕ್ಕಪೇಟೆ 150 52

ಒಟ್ಟು 586 207