Asianet Suvarna News Asianet Suvarna News

ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್: ತೆರಿಗೆ ಪಾವತಿ ವಿನಾಯಿತಿ ಸುಳಿವು ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಆಸತಿ ತೆರಿಗೆ ಪಾವತಿ ಕುರಿತು 30x40 ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ದಂಡ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ.

BBMP Property tax reduction and penalty reduction Discussions going on at Government sat
Author
First Published Jan 16, 2024, 6:32 PM IST

ಬೆಂಗಳೂರು (ಜ.16): ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ ಕುರಿತ ನೋಟೀಸ್, ದುಬಾರಿ ದಂಡದ ವಿಚಾರವಾಗಿ ಅನೇಕ ದೂರುಗಳು ವ್ಯಕ್ತವಾಗುತ್ತಿದ್ದು, 30x40 ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ದಂಡ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು.

ಗಾಂಧಿನಗರದ ಶಿರೂರ್ ಉದ್ಯಾನವನದಲ್ಲಿ ಮಂಗಳವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ ಆಗಿದೆ ಎಂಬ ಅನೇಕ ದೂರುಗಳು ಬಂದಿವೆ. ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ಎಂದು ನೋಟೀಸ್ ಬಂದಿರುವುದರ ಬಗ್ಗೆ ಗಾಬರಿಯಾಗಬೇಡಿ. ದಂಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ. ಈ ಕಾರ್ಯಕ್ರಮ ನಡೆದ ಎಲ್ಲಾ ಕ್ಷೇತ್ರಗಳಲ್ಲೂ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.

ರಾಜ್ಯದ ಎಲ್ಲ ಪೊಲೀಸರಿಗೆ ಬೆಳ್ಳಿ ಪದಕ ವಿತರಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

2020 ರಲ್ಲಿ ಜಾರಿಗೆ ಬಂದ ಆಸ್ತಿ ತೆರಿಗೆ ಕುರಿತ  ಕಾಯ್ದೆಯಿಂದಾಗಿ ಜನರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಈಗ ಆ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಕೆಲ ದಿನಗಳಲ್ಲಿ ಈ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲಾಗುವುದು. ನಮ್ಮ ಸರ್ಕಾರವೇ ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೇ ನಿಮ್ಮ ಸ್ವತ್ತಿನ ದಾಖಲೆಗಳನ್ನು ಉಚಿತವಾಗಿ ತಂದು ಕೊಡಲಾಗುವುದು. ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಯಾರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೋ, ಅವರಿಂದ ಅಷ್ಟು ಕಟ್ಟಿಸಿಕೊಳ್ಳಿ. ಯಾರಾದರೂ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಮುಂದಿನ ವರ್ಷ ಅದನ್ನು ಸರಿದೂಗಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಎಲ್ಲರೂ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರಬೇಕು. ಜನರಿಗೂ ಅನುಕೂಲ ಆಗಬೇಕು, ಪಾಲಿಕೆಗೂ ಆದಾಯ ಬರಬೇಕು. ನಿಮ್ಮ ತೆರಿಗೆ ಹಣವಿಲ್ಲದೆ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ನಾವು ಇಷ್ಟು ದಿನ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆಯಲ್ಲಿ ಜನ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಮೂರು ಅಂತಸ್ತಿನ ಮನೆ ಇದ್ದರೆ ಒಂದು ಅಂತಸ್ತು ಎಂದು ತೋರಿಸಿ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಹಿಂದೂಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ: ನಿಡುಮಾಮಿಡಿ ಸ್ವಾಮೀಜಿ

ಬಿಬಿಎಂಪಿ ಅಧಿಕಾರಿಗಳು ಅಧಿಕಾರಿಗಳು ನಿಮಗೆ ಸಹಕಾರ ನೀಡದ ಕಾರಣ ನೀವು ನಮ್ಮ ಬಳಿ ಬರುತ್ತೀರಿ. ನಿಮ್ಮ ವೈಯಕ್ತಿಕ ಸಮಸ್ಯೆ, ಏರಿಯಾ ಸಮಸ್ಯೆ ಹೊತ್ತು ತಂದಿದ್ದೀರಿ. ಎಲ್ಲರ ಸಮಸ್ಯೆಯನ್ನು ಆಲಿಸುತ್ತೇವೆ. ನಿಮ್ಮ ಅಹವಾಲುಗಳನ್ನು ನೋಂದಣಿ ಮಾಡಿಕೊಳ್ಳಿ. ನಿಮ್ಮ ಹೆಸರು, ಸಮಸ್ಯೆ ಹಾಗೂ ದೂರವಾಣಿ ಸಂಖ್ಯೆ ನಮೂದಿಸಿ. ನಿಮ್ಮ ಅಹವಾಲು ಬಗೆಹರಿಸಲು ಪ್ರತ್ಯೇಕ ತಂಡ ರಚಿಸುತ್ತೇವೆ. ನೀವು ಕೊಟ್ಟಿರುವ ಅರ್ಜಿಗಳನ್ನು ವಿಂಗಡಿಸಿ, ಅವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುತ್ತೇವೆ. ನಿಮ್ಮ ದೂರವಾಣಿ ಸಂಖ್ಯೆಗೆ ಪಾಲಿಕೆ ಅಧಿಕಾರಿಗಳು ಸಂಪರ್ಕಿಸುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios