ಬೆಂಗಳೂರು [ಸೆ.20]:  ಜೆ.ಪಿ.ನಗರದ ವಸತಿ ಪ್ರದೇಶವೊಂದರಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ‘ಬೈ ದ ಪೀಪಲ್‌’ ಪಬ್‌ ಮೇಲೆ ಬಿಬಿಎಂಪಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ 15 ಸಾವಿರ ರು. ದಂಡ ವಿಧಿಸಿದ್ದಾರೆ. ಜತೆಗೆ, ಕೂಡಲೇ ಪಬ್‌ ಬಂದ್‌ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಒಂದು ವೇಳೆ ತಾವಾಗಿಯೇ ಬಾಗಿಲು ಹಾಕದಿದ್ದರೆ ಶುಕ್ರವಾರ ನಾವೇ ಬಂದು ಬೀಗ ಜಡಿಯಬೇಕಾಗುತ್ತದೆ ಎಂದು ಪಬ್‌ ಮಾಲಿಕರಿಗೆ ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದೆಂಬ ಸ್ಪಷ್ಟನಿಯಮವಿದ್ದರೂ, ಜೆ.ಪಿ.ನಗರದ 4ನೇ ಹಂತದ ಡಾಲರ್ಸ್‌ ಕಾಲೋನಿಯ ವಸತಿ ಪ್ರದೇಶದಲ್ಲಿ ‘ಬೈ ದ ಪೀಪಲ್‌’ ಹೆಸರಿನ ಪಬ್‌ಅನ್ನು ಹಲವು ದಿನಗಳಿಂದ ನಡೆಸಲಾಗುತ್ತಿತ್ತು. ಇದರಿಂದ ಸ್ಥಳೀಯ ನಾಗರಿಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವುದಾಗಿ ಬಂದ ಆರೋಪ, ದೂರಿನ ಮೇಲೆ ಸುವರ್ಣ ನ್ಯೂಸ್‌ ಗುರುವಾರ ಸ್ಥಳಕ್ಕೆ ತೆರಳಿ ರಿಯಾಲಿಟಿ ಚೆಕ್‌ ನಡೆಸಿ ವರದಿ ಪ್ರಸಾರ ಮಾಡಿತ್ತು.

ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು, ಅನಧಿಕೃತವಾಗಿ ನಡೆಯುತ್ತಿದ್ದ ‘ಬೈ ದ ಪೀಪಲ್‌’ ಪಬ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ, ನಿಯಮ ಉಲ್ಲಂಘಿಸಿ ವಸತಿ ಪ್ರದೇಶದಲ್ಲಿ ಪಬ್‌ ನಡೆಸುತ್ತಿರುವುದಲ್ಲದೆ, ಇದೇ ಕಾರಣಕ್ಕೆ ಪಬ್‌ ನಡೆಸಲು ಬಿಬಿಎಂಪಿಯಿಂದ ವಾಣಿಜ್ಯ ಪರವಾನಿಗಿಯನ್ನೂ ಪಡೆಯದಿರುವುದು ಹಾಗೂ ನಕ್ಷೆ ಉಲ್ಲಂಘನೆ, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದು ಸೇರಿದಂತೆ ಹಲವು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಜತೆಗೆ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನ ಹಾಗೂ ಕಸ ವಿಂಗಡಣೆ ಮಾಡದೇ ವಿಲೇವಾರಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಪಬ್‌ ಮಾಲಿಕರಿಗೆ 15 ಸಾವಿರ ರು. ದಂಡ ವಿಧಿಸಿದ್ದಾರೆ. ಅಲ್ಲದೆ, ತಕ್ಷಣವೇ ಪಬ್‌ ಬಂದ್‌ ಮಾಡುವಂತೆ ಜಯನಗರ ಬಿಬಿಎಂಪಿ ಉಪವಿಭಾಗದ ಆರೋಗ್ಯ ಅಧಿಕಾರಿ ಕಲ್ಯಾಣ ಮೋಹನ್‌ ಪಬ್‌ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಂದು ವೇಳೆ ಬಂದ್‌ ಮಾಡದಿದ್ದರೆ ಮತ್ತೆ ದಾಳಿ ಮಾಡಿ ಪಾಲಿಕೆಯಿಂದಲೇ ಬೀಗ ಜಡಿಯುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

 ‘ಸುವರ್ಣ ನ್ಯೂಸ್‌’ ಪ್ರತಿನಿಧಿಗಳ ಮೇಲೆ ಗುಂಡಾಗಿರಿ

ಜೆ.ಪಿ.ನಗರದ ಡಾಲರ್ಸ್‌ ಕಾಲೋನಿಯ ಜನವಸತಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಜನವಸತಿ ಪ್ರದೇಶದಲ್ಲಿ ಬೈ ದ ಪೀಪಲ್‌ ಪಬ್‌ ನಡೆಸಲಾಗುತ್ತಿದೆ. ಇದರಿಂದ ತೀವ್ರ ಸಮಸ್ಯೆ ಅನುಭವಿಸುತ್ತಿದ್ದು, ಬಿಬಿಎಂಪಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಮಾಡಿದ ಆರೋಪ ಮತ್ತು ದೂರಿನ ಮೇರೆಗೆ ‘ಕನ್ನಡಪ್ರಭ’ ಸೋದರ ಸಂಸ್ಥೆ ‘ಸುವರ್ಣ ನ್ಯೂಸ್‌’ ಗುರುವಾರ ಸ್ಥಳಕ್ಕೆ ತೆರಳಿ ರಿಯಾಲಿಟಿ ಚೆಕ್‌ಗೆ ತೆರಳಿತ್ತು.

ಸ್ಥಳಕ್ಕೆ ಹೋಗುತ್ತಿದ್ದಂತೆ ಪಬ್‌ನ ಸಿಬ್ಬಂದಿ, ‘ಸುವರ್ಣ ನ್ಯೂಸ್‌’ ಪ್ರತಿನಿಧಿಗಳ ಮೇಲೆ ಗೂಂಡಾಗಿರಿ ಮಾಡಿದೆ. ಕ್ಯಾಮೆರಾಮನ್‌ಅನ್ನು ಪಬ್‌ ಒಳಗೆ ಎಳೆದೊಯ್ದಿದ್ದಲ್ಲದೆ, ನೀವೇನು ನಮ್ಮ ಪಬ್‌ ವಿಚಾರಕ್ಕೆ ಬರುವುದು ಎಂದು ಧಮಕಿ ಸಹ ಹಾಕಿದ ಘಟನೆ ನಡೆದಿದೆ.

ಆರ್‌ಸಿ ಅಭಿಯಾನ ಪರಿಣಾಮ: ನಗರದ ಜನವಸತಿ ಪ್ರದೇಶಗಳ ಜನರ ನೆಮ್ಮದಿ ಹಾಳು ಮಾಡುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹಾಗೂ ಸಂಸದ ಪಿ.ಸಿ.ಮೋಹನ್‌ ದೊಡ್ಡ ಅಭಿಯಾನ ಆರಂಭಿಸಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಬಿಬಿಎಂಪಿಗೆ ದೂರು ಕೊಡಿ ಜತೆಗೆ ಇ-ಮೇಲ್‌ (್ಞಛಿಡಿಚಿಛ್ಞಿಜa್ಝ್ಠ್ಟ್ಠಃ್ಟa್ಜಛಿಛಿv.ಜ್ಞಿ) ಮೂಲಕ ತಮಗೂ ದೂರಿನ ಪ್ರತಿ ಸಲ್ಲಿಸಿ, ಆ ದೂರುಗಳನ್ನು ಆಧರಿಸಿ ಬಿಬಿಎಂಪಿ ಮೇಲೆ ಅಕ್ರಮ ವಾಣಿಜ್ಯ ಚಟುವಟಿಕೆಗಳ ತೆರವಿಗೆ ಹೋರಾಟ ನಡೆಸುವುದಾಗಿ ಸಂಸದರು ಭರವಸೆ ನೀಡಿದ್ದರು.

ಇದರ ಪರಿಣಾಮ ಸುವರ್ಣ ನ್ಯೂಸ್‌ಗೆ ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಅಕ್ರಮವಾಗಿ ನಡೆಯುತ್ತಿರುವ ಜೆ.ಪಿ.ನಗರದ ಪಬ್‌ನ ನಿಜಬಣ್ಣ ಬಯಲು ಮಾಡಲು ಸ್ಥಳೀಯರೊಂದಿಗೆ ಸ್ಥಳಕ್ಕೆ ತೆರಳಿದ ‘ಸುವರ್ಣ ನ್ಯೂಸ್‌’ ಸಿಬ್ಬಂದಿಯನ್ನು ಕಂಡ ಕೂಡಲೇ ಪಬ್‌ ಮತ್ತು ಇದೇ ಕಟ್ಟಡದಲ್ಲಿರುವ ಮೆಗಾ ಟ್ರಾವೆಲ್ಸ್‌ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದರು. ಇದನ್ನು ಸ್ಥಳೀಯರು ವ್ಯಾಪಕವಾಗಿ ಖಂಡಿಸಿದ್ದಾರೆ.

ನಗರದ ಹಲವೆಡೆ ವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆಗಳು ತಲೆ ಎತ್ತಿವೆ. ವಲಯ ನಿಯಂತ್ರಣ ಕಾಯ್ದೆಗೆ ಇದು ವಿರುದ್ಧವಾಗಿದೆ. ಇದರಿಂದ ಸಾಮಾಜಿಕ ಸ್ವಾಸ್ತ್ಯ ಹಾಳಾಗುತ್ತಿದೆ. ವಾಹನ ಪಾರ್ಕಿಂಗ್‌ ಸಮಸ್ಯೆ, ನೀರು ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕಾದರೆ ಈ ಎಲ್ಲ ಅಕ್ರಮ ವಾಣಿಜ್ಯ ಚಟುವಟಿಕೆಗಳು ಬಂದ್‌ ಆಗಬೇಕು. ಈಗಾಗಲೇ ಮುಖ್ಯಮಂತ್ರಿಗಳು ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಬೇಕು. ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಆಗ್ರಹವಾಗಿದೆ.

-ಎನ್‌.ಆರ್‌.ಸುರೇಶ್‌, ಸಿಇಒ, ನಮ್ಮ ಬೆಂಗಳೂರು ಪ್ರತಿಷ್ಠಾನ.