ಬೆಂಗಳೂರು [ಡಿ.04]:  ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅವಧಿ ಡಿ.5ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಡಿ.4ರ ಬುಧವಾರ ಬೆಳಗ್ಗೆ 11.30ಕ್ಕೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಪಾಲಿಕೆ ಸದಸ್ಯರು ಸಮಿತಿಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡದೇ ಗೈರು ಹಾಜರಾಗುವ ಮೂಲಕ ಚುನಾವಣೆ ಮುಂದೂಡಿಕೆ ಆಗುವಂತೆ ಮಾಡಲು ತಂತ್ರ ರೂಪಿಸಿದ್ದು, ಚುನಾವಣೆ ನಡೆಯುವುದೋ ಇಲ್ಲವೋ ಎಂಬ ಕುತೂಹಲ ಹುಟ್ಟು ಹಾಕಿದೆ.

ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಡಿ.5ರಂದು ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಮೂರು ಪಕ್ಷಗಳ ಸದಸ್ಯರೂ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳವಾರ ಸಂಜೆಗೆ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಬುಧವಾರ ಮನೆ ಮನೆ ಪ್ರಚಾರ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪಾಲಿಕೆ ಸದಸ್ಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆ ಹಾಜರಾಗುವುದು ಅನುಮಾನವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಪಾಲಿಕೆಯಲ್ಲಿ 101 ಬಿಜೆಪಿ, 76 ಜನ ಕಾಂಗ್ರೆಸ್‌, ಜೆಡಿಎಸ್‌ನಲ್ಲಿ 14 ಜನ ಹಾಗೂ 7 ಪಕ್ಷೇತರ ಸದಸ್ಯರು ಇದ್ದಾರೆ. ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಯಾರೆಲ್ಲಾ ಸದಸ್ಯರು ಇರಬೇಕು ಎಂಬುದನ್ನು ಮೂರು ಪಕ್ಷದ ಮುಖಂಡರು ಚುನಾವಣೆಗೆ ಮುನ್ನವೇ ತೀರ್ಮಾನಿಸಿರುತ್ತಾರೆ. ಈ ಬಾರಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಅದು ಸಹ ಸಾಧ್ಯವಾಗಿಲ್ಲ. ಹಾಗಾಗಿ, ಮೂರು ಪಕ್ಷದಿಂದ ಬುಧವಾರ ನಡೆಯುವ ಸ್ಥಾಯಿ ಸಮಿತಿ ಸದಸ್ಯ ಸ್ಥಾನದ ಆಯ್ಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆಗುವ ಸಾಧ್ಯತೆ ಕಡಿಮೆಯಾಗಿದೆ.

ಫಲಿಸದ ಮುಂದೂಡುವ ತಂತ್ರ:

ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವಂತೆ ಮೂರು ರಾಜಕೀಯ ಪಕ್ಷಗಳು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಿಗೆ ಮನವಿ ಮಾಡಿದ್ದರು. ಆದರೆ, ಆಯುಕ್ತ ಹರ್ಷಗುಪ್ತ ಈ ಮನವಿಯನ್ನು ತಿರಸ್ಕರಿಸಿದ್ದರು. ನಿಗದಿಯಂತೆ ಡಿ.4ಕ್ಕೆ ಚುನಾವಣೆ ನಡೆಸಲು ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಬಿಬಿಎಂಪಿಯ ಕೇಂದ್ರ ಕಚೇರಿಯು ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ಸ್ಥಾಯಿ ಸಮಿತಿ ಚುನಾವಣೆಗೂ ನೀತಿ ಸಂಹಿತೆ ಅನ್ವಯಿಸುವುದರಿಂದ ಚುನಾವಣೆ ಮುಂದೂಡುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ, ಹರ್ಷಗುಪ್ತ ಚುನಾವಣೆ ನಡೆಯುವ ಸ್ಥಳವನ್ನು ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣ ಪುರಭವನಕ್ಕೆ ಸ್ಥಳಾಂತರಿಸಿ ಡಿ.4ಕ್ಕೆ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಮಾರು 5 ಲಕ್ಷ ರು. ನಷ್ಟ?

ಒಂದು ವೇಳೆ ಬಿಬಿಎಂಪಿ ಸದಸ್ಯರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆಗೆ ನಾಮಪತ್ರ ಸಲ್ಲಿಸದಿದ್ದರೆ ಅಥವಾ ಗೈರು ಹಾಜರಾಗುವ ಮೂಲಕ ಚುನಾವಣೆ ಮತ್ತೆ ಮುಂದೂಡಿಕೆಯಾದರೆ, ಬಿಬಿಎಂಪಿಗೆ ಸುಮಾರು 5ರಿಂದ 6 ಲಕ್ಷ ನಷ್ಟವಾಗಲಿದೆ. ಪಾಲಿಕೆ ಸದಸ್ಯರಿಗಾಗಿ ತರಿಸಲಾದ ಉಪಹಾರ, ಊಟ, ಚುನಾವಣೆ ಕಾರ್ಯದಲ್ಲಿ ಭಾಗಿಯಾಗುವ ಅಧಿಕಾರಿ ಸಿಬ್ಬಂದಿ ಗೌರವ ಧÜನ ನಷ್ಟವಾಗಲಿದೆ.

ನಗರದ ನಾಲ್ಕು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಬಿಬಿಎಂಪಿಯ ಹಲವು ಸದಸ್ಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ, ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಭಾಗವಹಿಸುವುದು ಅನುಮಾನ.

-ಅಬ್ದುಲ್‌ ವಾಜೀದ್‌, ವಿರೋಧ ಪಕ್ಷದ ನಾಯಕ.

ಡಿ.5ಕ್ಕೆ ಸ್ಥಾಯಿ ಸಮಿತಿ ಸದಸ್ಯರ ಮತ್ತು ಅಧ್ಯಕ್ಷ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದರಿಂದ ಡಿ.4ಕ್ಕೆ ಚುನಾವಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ನಿಗದಿಯಂತೆ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೋರಂ ಕಡಿಮೆ ಇದ್ದರೆ, ಚುನಾವಣೆ ಮುಂದೂಡಲಾಗುವುದು.

-ಹರ್ಷಗುಪ್ತಾ, ಪ್ರಾದೇಶಿಕ ಆಯುಕ್ತ.