ಬೆಂಗಳೂರು [ಸೆ.30]: ಬಿಬಿಎಂಪಿ ನೂತನ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಗೆ ಅ.1ರ ಮಂಗಳವಾರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಸೋಮವಾರ ಸಭೆ ಕರೆದಿವೆ.

ಶತಾಯಗತಾಯ ಈ ಬಾರಿ ಪಾಲಿಕೆ ಆಡಳಿತ ಹಿಡಿಯುವ ಪ್ರಯತ್ನದಲ್ಲಿರುವ ಬಿಜೆಪಿಯಲ್ಲಿ ಒಂದೆಡೆ ನಾಲ್ವರು ಮೇಯರ್‌ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿ ನಡೆದಿದೆ. ಹಾಗಾಗಿ ಯಾರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂದು ನಿರ್ಧರಿಸಲು ಸೋಮವಾರ ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಬೆಂಗಳೂರಿನ ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ಬಿಬಿಎಂಪಿಯ ಹಾಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಗೋವಿಂದರಾಜನಗರ ವಾರ್ಡ್‌ ಸದಸ್ಯ ಉಮೇಶ್‌ ಶೆಟ್ಟಿ, ಕಾಡುಮಲ್ಲೇಶ್ವರ ವಾರ್ಡ್‌ ಸದಸ್ಯ ಮಂಜುನಾಥ ರಾಜು ಮತ್ತು ಕುಮಾರಸ್ವಾಮಿ ಲೇಔಟ್‌ ವಾರ್ಡ್‌ ಸದಸ್ಯ ಎಲ್‌.ಶ್ರೀನಿವಾಸ್‌ ಮೇಯರ್‌ ಸ್ಥಾನಕ್ಕೇರಲು ತಮ್ಮ ನಾಯಕರ ಮೂಲಕ ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಜತೆಗೆ ಜೋಗುಪಾಳ್ಯವಾರ್ಡ್‌ ಸದಸ್ಯ ಎಂ.ಗೌತಮ್‌ ಕುಮಾರ್‌, ಕತ್ತರಿಗುಪ್ಪೆ ವಾರ್ಡ್‌ ಸದಸ್ಯ ಎಂ.ವೆಂಕಟೇಶ್‌ (ಸಂಗಾತಿ) ಮತ್ತು ಜಕ್ಕೂರು ವಾರ್ಡ್‌ ಸದಸ್ಯ ಕೆ.ಎ.ಮುನೀಂದ್ರ ಕುಮಾರ್‌ ಕೂಡ ಆಕಾಂಕ್ಷಿಗಳಾಗಿದ್ದಾರೆ.

ನಾಲ್ಕು ವರ್ಷಗಳಿಂದ ಪ್ರತಿಪಕ್ಷ ನಾಯಕರಾಗಿರುವ ಪದ್ಮನಾಭರೆಡ್ಡಿಗೆ ಮೇಯರ್‌ ಸ್ಥಾನ ನೀಡಲು ಪಕ್ಷ ಹಾಗೂ ಸಂಘ ಪರಿವಾರದಲ್ಲಿ ವಿರೋಧವಿದೆ. ಕೆಲ ಮಾಜಿ ಮೇಯರ್‌ಗಳೂ ಅವರ ವಿರುದ್ಧ ಇದ್ದಾರೆ. ಇನ್ನು ಕೆಲವರು ಅವರನ್ನು ಮೇಯರ್‌ ಮಾಡಿದರೆ ಅವರ ವಿರುದ್ಧದ ಆರೋಪಗಳನ್ನು ನಾವೇ ಬಹಿರಂಗಪಡಿಸುವ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಶಾಸಕ ಆರ್‌.ಅಶೋಕ್‌ ಹಾಗೂ ಕೆಲ ರೆಡ್ಡಿ ಸಮುದಾಯದ ಶಾಸಕರು ಮಾತ್ರ ಪದ್ಮನಾಭರೆಡ್ಡಿ ಅವರನ್ನೇ ಮೇಯರ್‌ ಮಾಡಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಮ್ಮ ಬೆಂಬಲಿಗರಾದ ಮಂಜುನಾಥ್‌ ರಾಜು ಪರ ನಿಂತಿದ್ದಾರೆ. 2005ರಲ್ಲಿ ಬಿಜೆಪಿ ಅತಿ ಹೆಚ್ಚು ಸೀಟು ಗೆದ್ದಾಗ ಮಂಜುನಾಥ್‌ ರಾಜು ಅವರನ್ನು ಮೇಯರ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಯಿಂದ ಅವರಿಗೆ ಮೇಯರ್‌ ಸ್ಥಾನ ಕೈತಪ್ಪಿದೆ. ಮೇಯರ್‌ ಹುದ್ದೆಗೆ ಅವರು ಅರ್ಹ ಅಭ್ಯರ್ಥಿಯಾಗಿದ್ದು, ಅವರನ್ನೇ ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂದು ಸರ್ಕಾರ ಮತ್ತು ಪಕ್ಷದ ಮೂಲಕ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ಒಕ್ಕಲಿಗರ ಸಮುದಾಯಕ್ಕೆ ಸೇರಿದ ಎಲ್‌.ಶ್ರೀನಿವಾಸ್‌ ಅವರು ಕೂಡ ತಮ್ಮದೇ ಮಾರ್ಗಗಳ ಮೂಲಕ ಮೇಯರ್‌ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂವರ ಪೈಕಿ ಯಾರಿಗೆ ಮೇಯರ್‌ ಸ್ಥಾನ ನೀಡಿದರೆ ಡಿಸೆಂಬರ್‌ನಲ್ಲಿ ನಡೆಯುವ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಮುಂದಿನ ವರ್ಷ ಎದುರಿಸಬೇಕಿರುವ ಬಿಬಿಎಂಪಿ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಆ ರೀತಿ ನೋಡುವುದಾದರೆ ಎಲ್‌.ಶ್ರೀನಿವಾಸ್‌ ಅವರನ್ನು ಮೇಯರ್‌ ಮಾಡಿದರೆ ಒಕ್ಕಲಿಗರ ಸಮಾಜವನ್ನು ಸಮಾಧಾನ ಪಡಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ. ಇವರ ನಡುವೆ ಅಚ್ಚರಿಯ ಬೆಳವಣಿಗೆಯಲ್ಲಿ ಮತ್ಯಾರನ್ನಾದರೂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ ಆಶ್ಚರ್ಯವಿಲ್ಲ.

ಪ್ರಬಲ ಪೈಪೋಟಿಗೆ ಮೈತ್ರಿ ಸಿದ್ಧತೆ!

ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಅಧಿಕಾರ ನಡೆಸಿಕೊಂಡು ಬಂದಿರುವ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಪಕ್ಷಗಳು ಈ ಬಾರಿ ತಮಗೆ ಅಧಿಕಾರ ಸಿಗುವುದು ಕಷ್ಟಎಂಬುದು ಗೊತ್ತಿದ್ದರೂ, ಅಷ್ಟುಸುಲಭವಾಗಿ ಅಧಿಕಾರ ಬಿಟ್ಟುಕೊಡದಿರಲು ನಿರ್ಧರಿಸಿವೆ.

ಈ ವರ್ಷವೂ ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಮೇಯರ್‌ ಅಭ್ಯರ್ಥಿ ಮತ್ತು ಜೆಡಿಎಸ್‌ನಿಂದ ಉಪಮೇಯರ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ಮೇಯರ್‌ ಅಭ್ಯರ್ಥಿ ಆಯ್ಕೆಗೆ ಸೋಮವಾರ ಮಧ್ಯಾಹ್ನ 3.30ಕ್ಕೆ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನಾಯಕರ ಸಭೆ ಕರೆಯಲಾಗಿದೆ. ಶಾಸಕ ರಾಮಲಿಂಗಾರೆಡ್ಡಿ ಅವರ ಬೆಂಬಲಿಗರಾದ ದತ್ತಾತ್ರೇಯ ವಾರ್ಡ್‌ ಸದಸ್ಯ ಸತ್ಯನಾರಾಯಣ ಅಥವಾ ಗುರಪ್ಪನಪಾಳ್ಯ ವಾರ್ಡ್‌ ಸದಸ್ಯ ಮಹಮದ್‌ ರಿಜ್ವಾನ್‌ ಅವರನ್ನು ಮೇಯರ್‌ ಅಭ್ಯರ್ಥಿಯಾಗಿ ಅಂತಿಮಗೊಳಿಸುವ ಸಾಧ್ಯತೆ ಇದೆ.

ಜೆಡಿಎಸ್‌ ಕೂಡ ಉಪಮೇಯರ್‌ ಅಭ್ಯರ್ಥಿ ಆಯ್ಕೆ ಮಧ್ಯಾಹ್ನ 12 ಗಂಟೆಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಭೆ ಕರೆದಿದ್ದು, ಪಕ್ಷದ ನಾಯಕರು ಅಭ್ಯರ್ಥಿ ಅಂತಿಮಗೊಳಿಸುತ್ತಾರೆ.