Bengaluru: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ
ಬೆಂಗಳೂರಿನ ಮಹದೇವಪುರದಲ್ಲಿ ಬಿಬಿಎಂಪಿ ವತಿಯಿಂದ ಶನಿವಾರ ಆರಂಭಿಸಿದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತವಾಗಿದೆ.
ಬೆಂಗಳೂರು (ಜೂ.17): ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣವಾದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡಿದೆ. ಬಿಜೆಪಿ ಸರ್ಕಾರದ ಅಧಿಕಾರ ಮುಗಿದು ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ರಾಜ್ಯ ರಾಜಧಾನಿ ಬೆಂಗಳೂರಿನ ಬಳಿ ನದಿಯಿಲ್ಲ, ಸಮುದ್ರವಿಲ್ಲ ಆದರೂ ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಇದಕ್ಕೆ ಕಾರಣ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಕಳೆದ ವರ್ಷ ತೀವ್ರ ಪ್ರವಾಹ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೆಲವು ಸಣ್ಣಪುಟ್ಟ ಶೆಡ್‌ಗಳು, ಕಾಂಪೌಂಡ್ ಹಾಗೂ ಖಾಲಿ ಜಾಗಗಳ ಒತ್ತುವರಿಯನ್ನು ತೆರವುಗೊಳಿಸಿ ವಶಪಡಿಸಿಕೊಳ್ಳಲಾಗುತ್ತಿತ್ತು.
ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ: ಸಚಿವ ಮಹದೇವಪ್ಪ
ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ: ರಾಜಕಾಲುವೆ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರದ ಕಂದಾಯ ಇಲಾಖೆಯಲ್ಲಿನ ಸಮನ್ವಯ ಕೊರತೆಯಿಂದಾಗಿ ಈಗ ಮತ್ತೊಮ್ಮೆ ತೆರವು ಕರ್ಯಾಚರಣೆಗೆ ಮುಂದಾದ ಸರ್ಕಾರ ನಗೆಪಾಟಲಿಗೀಡಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಕಟ್ಟಡ ತೆರವು ಮಾಡದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ (ಸ್ಟೇ ಆರ್ಡರ್) ಕೊಟ್ಟಿದ್ದರೂ ಈ ಬಗ್ಗೆ ಕಂದಾಐ ಇಲಾಖೆಯ ತಹಶೀಲ್ದಾರ್ ಅವರು ಒತ್ತುವರಿ ಮಾಡಿದ ಕಟ್ಟಡಗಳ ಮಾಲೀಕರ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದಿರಲಿಲ್ಲ. ಆದರೆ, ಸರ್ಕಾರದಿಂದ ತೆರವು ಕಾರ್ಯಾಚರಣೆಗೆ ಒತ್ತಡ ಬಂದ ಹಿನ್ನೆಲೆಯಲ್ಲಿ ಜೆಸಿಬಿ, ಹಿಟಾಚಿ ಸೇರಿ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆಗೆ ಹೋದ ಬಿಬಿಎಂಪಿಗೆ ಕೆಲವೇ ಗಂಟೆಗಳಲ್ಲಿ ತೆರವು ಮಾಡದಂತೆ ಸ್ಟೇ ಆರ್ಡರ್ ಅನ್ನು ತಹಶೀಲ್ದಾರರೇ ತೋರಿಸಿದ್ದಾರೆ.
ಸ್ಟೇ ಆರ್ಡರ್ ಇದ್ದರೂ ತಿಳಿಸದ ತಹಶೀಲ್ದಾರ್: ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್ ಕೊಟ್ಟಿದ್ದ ನೊಟೀಸ್ ಗೆ ನಿವಾಸಿಗಳು ಸ್ಟೇ ತಂದಿದ್ದರು. ಆದರೂ ತಹಶೀಲ್ದಾರ್ ಅವರು ಕೋರ್ಟ್ ತಡೆಯಾಜ್ಞೆ ನೀಡಿದ್ದರ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ (ಜೂ.15ರಂದು) ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ತೆರವು ಕಾರ್ಯಾಚರಣೆ ಬಗ್ಗೆ ತೀರ್ಮಾನ ಕೈಗೊಂಡಿದ್ದರೂ ಸ್ಟೇ ತಂದಿರುವ ಬಗ್ಗೆ ಮಾತನಾಡಿರಿಲ್ಲ. ಆದ್ದರಿಂದ 22 ಸ್ಥಳಗಳಲ್ಲಿ ಒತ್ತುವರಿ ಆಗಿರುವುದನ್ನು ಮಾರ್ಕ್ ಮಾಡಿಕೊಂಡು ತೆರವು ಕಾರ್ಯಾಚರಣೆ ಆರಂಭಿಸಿದ ನಂತರ ತಹಶೀಲ್ದಾರ್ ಸ್ಥಳಕ್ಕೆ ಬಂದು ಸ್ಟೇ ಆರ್ಡರ್ ಕಾಪಿ ತೋರಿಸಿದ್ದಾರೆ. ತಹಶೀಲ್ದಾರ್ ಯಡವಟ್ಟಿನಿಂದ ಮುಜುಗರಕ್ಕೀಡಾದ ಪಾಲಿಕೆ ತೆರವು ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ವಾಪಸ್ ಹೋಗಿದೆ.
ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ
ಸ್ಟೇ ಆರ್ಡರ್ ಬಗ್ಗೆ ಮಾಹಿತಿ ಇರಲಿಲ್ಲ:
ಮುನೇಕೊಳಲು ಏರಿಯಾದಲ್ಲಿ ತೆರವು ಮಾಡಲು ಬಂದಿದ್ದೇವೆ. ಕೆಆರ್ ಪುರದ ಹೊಯ್ಸಳ ನಗರದಲ್ಲಿ ತೆರವು ಮಾಡಲು ಅಂಗಡಿಗಳ ಮಾಲೀಕರು ಸಮಯಾವಕಾಶ ಕೇಳಿದ್ದಾರೆ. ಮುನೇಕೊಳಲು ಭಾಗದಲ್ಲಿ ತೆರವು ಮಾಡಲು ವಾರದ ಹಿಂದೆ ಸಿದ್ದತೆ ನಡೆಸಿದ್ದೆವು. ಇಲ್ಲಿ ವಕೀಲರು ತಡೆಯಾಜ್ಞೆ ಇದೆ ಅಂತ ಪತ್ರ ತೋರಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್ ಗಾರ್ಡ್ನನ್ ಸರ್ವೇ ನಂಬರ 34 ಇದೆ ಎಂದು ಹೇಳ್ತಿದ್ದಾರೆ. ಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ. 22 ಕಡೆ ಮಾರ್ಕ್ ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡುತ್ತೇವೆ.
- ಲೋಕೇಶ್, ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಇಂಜಿನಿಯರ್