‘ಅಪ್ಪ ಸತ್ತ ಮೇಲೆ ಹಾಸಿಗೆ ಇದೆ ಎಂದ ಬಿಬಿಎಂಪಿ’
ಹಣ ಕೊಡದ್ದಕ್ಕೆ ಆ್ಯಂಬುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟು ಹೋದ| ನನ್ನಪ್ಪನಿಗೆ ಕೊರೋನಾ ದೃಢಪಟ್ಟಿತ್ತು. ಎರಡು ದಿನಗಳಿಂದ ಹಾಸಿಗೆಗಾಗಿ ನಾಲೈದು ಆಸ್ಪತ್ರೆ ಸುತ್ತಾಡಿದೆ. ಯಾವೊಂದು ಆಸ್ಪತ್ರೆಯಲ್ಲೂ ಹಾಸಿಗೆ ಸಿಗಲಿಲ್ಲ. ಬಿಬಿಎಂಪಿ ಮತ್ತು ಸರ್ಕಾರ ಒಂದು ಹಾಸಿಗೆ ವ್ಯವಸ್ಥೆ ಮಾಡಿಲ್ಲ: ನೊಂದ ಮಗನ ಕಣ್ಣೀರು|
ಬೆಂಗಳೂರು(ಮೇ.01): ‘ಮೊನ್ನೆ ನನ್ನಪ್ಪನಿಗೆ ಕೋವಿಡ್ ದೃಢಪಟ್ಟ ನಂತರ ಐದಾರು ಆಸ್ಪತ್ರೆ ಅಲೆದರೂ ಬಿಬಿಎಂಪಿ ಮತ್ತು ಸರ್ಕಾರ ಒಂದೇ ಒಂದು ಹಾಸಿಗೆ ವ್ಯವಸ್ಥೆ ಮಾಡಲಿಲ್ಲ, ನಿನ್ನೆ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಮಧ್ಯಾಹ್ನ 2ಕ್ಕೆ 50 ಸಾವಿರ ಕಟ್ಟಲು ಹೇಳಿದ್ರು. 4 ಗಂಟೆಗೆ ಸೀರಿಯಸ್ ಅಂದ್ರು. ಆ ಮೇಲೆ ಅಪ್ಪಾ ಸತ್ತೇ ಹೋದ್ರು. ಇವತ್ತು ಬೆಳಗ್ಗೆ ಬಿಬಿಎಂಪಿ ಫೋನ್ ಮಾಡಿ ಹಾಸಿಗೆ ಇದೆ ಬನ್ನಿ ಕರೆದ್ರು..!’
ಸಕಾಲದಲ್ಲಿ ಸರ್ಕಾರ ಆಸ್ಪತ್ರೆಯಲ್ಲಿ ಹಾಸಿಗೆ ಕಲ್ಪಿಸಿದ್ದರೆ ತನ್ನ ಅಪ್ಪ ಬದುಕುತ್ತಿದ್ದರು ಎಂದು ಮಗ ಶುಕ್ರವಾರ ಸುಮನಹಳ್ಳಿ ಚಿತಗಾರದ ಮುಂದೆ ಗೋಳಾಡುತ್ತಿದ್ದ ದೃಶ್ಯ, ಕೋವಿಡ್ ಭೀಕರತೆ ಮತ್ತು ಸದ್ಯದ ಅವ್ಯವಸ್ಥೆಯನ್ನು ಕಣ್ಣ ಮುಂದೆ ಕಟ್ಟಿಕೊಟ್ಟಿತ್ತು.
"
ಕರುನಾಡಿಗೆ ಬಿಗ್ ಶಾಕ್: ಒಂದೇ ದಿನ ಬರೋಬ್ಬರಿ 48 ಸಾವಿರ ಕೊರೋನಾ ಕೇಸ್
‘ಮೊನ್ನೆ ನನ್ನಪ್ಪನಿಗೆ ಕೊರೋನಾ ದೃಢಪಟ್ಟಿತ್ತು. ಎರಡು ದಿನಗಳಿಂದ ಹಾಸಿಗೆಗಾಗಿ ನಾಲೈದು ಆಸ್ಪತ್ರೆ ಸುತ್ತಾಡಿದೆ. ಯಾವೊಂದು ಆಸ್ಪತ್ರೆಯಲ್ಲೂ ಹಾಸಿಗೆ ಸಿಗಲಿಲ್ಲ. ಬಿಬಿಎಂಪಿ ಮತ್ತು ಸರ್ಕಾರ ಒಂದು ಹಾಸಿಗೆ ವ್ಯವಸ್ಥೆ ಮಾಡಿಲ್ಲ. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ನಿನ್ನೆ ಬೆಳಿಗ್ಗೆ ಅಪ್ಪನನ್ನು ಸೇರಿಸಿದೆ. ಮಧ್ಯಾಹ್ನ 2 ಗಂಟೆಗೆ 50 ಸಾವಿರ ಬಿಲ್ ಕಟ್ಟಲು ಹೇಳಿದರು. ನಾಲ್ಕು ಗಂಟೆಗೆ ಸೀರಿಯಸ್ ಎಂದು ಆಸ್ಪತ್ರೆಯವರು ಹೇಳಿದರು. ಮಧ್ಯಾಹ್ನವಷ್ಟೇ ಅಪ್ಪನಿಗೆ ನಾನೇ ಇಡ್ಲಿ ತಿನ್ನಿಸಿದ್ದೆ. ಮನೆಗೆ ಹೋಗಿ ಬರುವಷ್ಟರಲ್ಲೇ ಅಪ್ಪ ಸತ್ತು ಹೋಗಿದ್ದರು. ಇವತ್ತು ಬೆಳಗ್ಗೆ ಬಿಬಿಎಂಪಿಯವರು ಕರೆ ಮಾಡಿ ಹಾಸಿಗೆ ಇದೆ ಬನ್ನಿ ಎಂದು ಕರೆಯುತ್ತಾರೆ’.
‘ಕೂಲಿ ಕೆಲಸ ಮಾಡಿ ನಮ್ಮನ್ನು ಅಪ್ಪ ಸಾಕಿದರು. ಆದರೆ, ಕೊರೋನಾ ಸೋಂಕು ತಗುಲಿದ ಅಪ್ಪನನ್ನು ಉಳಿಸಲು ನಮಗೆ ಒಂದು ಹಾಸಿಗೆ ಕೊಡಿಸಲಾಗಲಿಲ್ಲ. ವೈದ್ಯರ ಕಾಲು ಹಿಡಿದು ಹಾಸಿಗೆ ನೀಡಲು ಬೇಡಿದೆ. ಅವರು ಕಾಲು ಕಿತ್ತುಕೊಂಡು ಹೋದರು. ಐದು ಸಾವಿರ ಕೊಡಿ, ಹತ್ತು ಸಾವಿರ ಕೊಡಿ ಎಂದು ಕೇಳುತ್ತಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ, ನಮ್ಮನ್ನು ರಸ್ತೆಯಲ್ಲಿ ಬಿಟ್ಟು ಹೋದ. ಎಲ್ಲಿ ಹೋದರೂ ಲಕ್ಷ ಲಕ್ಷ ದುಡ್ಡು ಕೇಳುತ್ತಾರೆ. ಈಗ 10 ಲಕ್ಷ ಬೇಕಾದರೂ ಕೊಡುತ್ತೇನೆ. ನನ್ನಪ್ಪನನ್ನು ಬದುಕಿಸಿ’ ಎಂದು ಮಗ ಆಕ್ರೋಶದಿಂದ ನುಡಿದನು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona