ಬೆಂಗಳೂರು(ಅ.13): ಬಿಬಿಎಂಪಿ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿ ಮತ್ತು ವಾರ್ಡ್‌ ಮರು ವಿಂಗಡಣೆ ಅಧ್ಯಯನಕ್ಕೆ ಕಮೀಷನ್‌ ರಚಿಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ಚುನಾವಣೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.

ಶೀಘ್ರ ಬಿಬಿಎಂಪಿ ಚುನಾವಣೆ ನಡೆಸುವಂತೆ ಪಾಲಿಕೆ ಮಾಜಿ ಸದಸ್ಯ ಶಿವರಾಜು ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಪ್ರತ್ಯೆಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ವಾದ ಮಂಡಿಸಿ, ಈಗಾಗಲೇ ಬಿಬಿಎಂಪಿಯ 198 ವಾರ್ಡ್‌ಗಳ ಮೀಸಲು ಪಟ್ಟಿಮತ್ತು ಮತದಾರರ ಪಟ್ಟಿಸಿದ್ಧಪಡಿಸಲಾಗಿದೆ. ಚುನಾವಣೆಯ ಬಹುತೇಕ ಕಾರ್ಯ ಪೂರ್ಣಗೊಳಿಸಲಾಗಿದೆ. ಈ ಹಂತದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲು ಮತ್ತು ವಾರ್ಡ್‌ ಮರು ವಿಂಗಡಣೆಯ ಅಧ್ಯಯನಕ್ಕೆ ಕಮೀಷನ್‌ ರಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಇದರಿಂದ ಚುನಾವಣಾ ಆಯೋಗ ಈವರೆಗೆ ನಡೆಸಿದ ಎಲ್ಲಾ ಕೆಲಸಗಳು ಅರ್ಥವಿಲ್ಲಂತಾಗುತ್ತದೆ. ಚುನಾಯಿತ ಸದಸ್ಯರ ಅವಧಿ ಪೂರ್ಣಗೊಳ್ಳುವುದರ ಒಳಗೆ ಚುನಾವಣೆ ನಡೆಸಬೇಕೆಂಬ ನಿಯಮವೂ ಉಲ್ಲಂಘನೆಯಾಗಲಿದೆ ಮತ್ತು ಚುನಾವಣೆಯೂ ವಿಳಂಬವಾಗಲಿದೆ ಎಂದು ಆಕ್ಷೇಪಿಸಿದರು.
ಅಲ್ಲದೆ, ವಾರ್ಡ್‌ ಮರು ವಿಂಗಡಣೆ ಅಧ್ಯಯನಕ್ಕೆ ನೇಮಿಸಿರುವ ಕಮೀಷನ್‌ಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಆರು ತಿಂಗಳು ನಂತರ ಕಮೀಷನ್‌ ವರದಿ ಆಧರಿಸಿ ಮತ್ತೆ ಮೀಸಲು ಹಾಗೂ ಮತದಾರರ ಪಟ್ಟಿಸಿದ್ಧಪಡಿಸಬೇಕು. ಆ ಕಾರ್ಯಗಳೆಲ್ಲಾ ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷ ಸಮಯ ಹಿಡಿಯಬಹುದು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಬೆಂಗಳೂರಿನಲ್ಲಿ ಶೀಘ್ರ ಚುನಾವಣೆ: ಸರ್ಕಾರಕ್ಕೆ ಹೈಕೋ​ರ್ಟ್ ನೋಟಿಸ್‌

ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು, ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ-1976ಕ್ಕೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 225ಕ್ಕೆ ಹೆಚ್ಚಿಸಿ (ಗರಿಷ್ಠ 250 ಮೀರದಂತೆ) ಸುಗ್ರೀವಾಜ್ಞೆ ಹೊರಡಿಸಲಾಗಿದೆ. ವಾರ್ಡ್‌ ಮರು ವಿಂಗಡಣೆ ಬಗ್ಗೆ ಅಧ್ಯಯನ ನಡೆಸಲು ಕಮೀಷನ್‌ ರಚಿಸಲಾಗಿದೆ. ವಿಧಾನಸಭೆ ಉಪ ಚುನಾವಣೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಎರಡು ಬಗ್ಗೆ ನೋಟಿಫಿಕೇಷನ್‌ ಹೊರಡಿಸಲು ಸಾಧ್ಯವಾಗಿಲ್ಲ. ನೋಟಿಫಿಕೇಷನ್‌ ಹೊರಡಿಸುವುದಕ್ಕೆ ಅನುಮತಿ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಒಂದು ಹಂತದಲ್ಲಿ ಕನಿಷ್ಠ ಒಂದು ವರ್ಷ ಬಿಬಿಎಂಪಿಗೆ ಚುನಾವಣೆ ನಡೆಸಬಾರದು ಎಂಬುದಾಗಿ ಸರ್ಕಾರ ಉದ್ದೇಶಿಸಿರುವಂತೆ ಕಾಣುತ್ತಿದೆ ಎಂದು ಪೀಠ ನುಡಿಯಿತು.

ಶೀಘ್ರವೇ ಚುನಾವಣೆಗೆ ಸೂಚಿಸಿ: ಅರ್ಜಿದಾರ

ಅರ್ಜಿದಾರ ಶಿವರಾಜು ಪರ ವಕೀಲರು, ಬಿಬಿಎಂಪಿಗೆ ಚುನಾಯಿತ ಸದಸ್ಯರ ಆಡಳಿತದ ಬದಲು ಆಡಳಿತಾಧಿಕಾರಿಯ ಆಡಳಿತ ಮುಂದುವರಿಸಬೇಕೆಂಬ ಆಲೋಚನೆ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿದೆ. ಮುಖ್ಯವಾಗಿ 2021 ಜನಗಣತಿ ವರ್ಷವಾಗಿದೆ. ಆ ಪ್ರಕ್ರಿಯೆ ಆರಂಭವಾಗಿ ಜನಗಣತಿ ಪೂರ್ಣಗೊಂಡ ನಂತರ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿ ಬಿಬಿಎಂಪಿಯ ವಾರ್ಡ್‌ ಮರು ವಿಂಗಡನೆ 2021ರ ಜನಗಣತಿ ಪ್ರಕಾರ ನಡೆಸಬೇಕಿತ್ತು ಎಂಬುದಾಗಿ ಆಕ್ಷೇಪಿಸಬಹುದು. ಆಗ ಮತ್ತೊಂದು ಸಮಸ್ಯೆ ಉದ್ಭವಿಸಲಿದೆ. ಆದ್ದರಿಂದ ಶೀಘ್ರವೇ ಚುನಾವಣೆ ನಡೆಸಲು ಸರ್ಕಾರಕ್ಕೆ ನ್ಯಾಯಾಲಯವೇ ಆದೇಶಿಸಬೇಕು ಎಂದು ಕೋರಿದರು.

ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ಆಲೋಚನೆಯಾಗಿದೆ. ಆದರೆ, ವಾರ್ಡ್‌ ಮರು ವಿಂಗಡನೆ ಮಾಡಲೇಬೇಕಿರುವ ಕಾರಣ ಆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎಂದರು. ಅಂತಿಮವಾಗಿ ಸರ್ಕಾರದ ಸುಗ್ರೀವಾಜ್ಞೆ ಪ್ರಶ್ನಿಸಿ ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂಬ ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಪೀಠ ಅ.20ಕ್ಕೆ ವಿಚಾರಣೆ ಮುಂದೂಡಿತು.