ಬೆಂಗಳೂರು(ಫೆ.19): ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ ಜಾಗದಲ್ಲಿರುವ ನಾಯಂಡಹಳ್ಳಿಯಲ್ಲಿ ಇರುವ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಯನ್ನು ಸ್ಥಳಾಂತರಿಸಲು ಬಿಬಿಎಂಪಿ ತೀರ್ಮಾನಿಸಿದೆ.

ಈ ಕುರಿತು ಬಿಬಿಎಂಪಿ ಆಯುಕ್ತರು ಆದೇಶಿಸಿದ್ದು, ಕೊಳಚೆ ನಿರ್ಮೂಲನಾ ಮಂಡಳಿ ಹಿಂದುಳಿದ ವರ್ಗದ ಜನರಿಗೆ ವಸತಿ ಸಮುಚ್ಛಯ ನಿರ್ಮಾಣ ಮಾಡುವುದಕ್ಕೆ ಯೋಜನೆ ರೂಪಿಸಿರುವುದರಿಂದ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆ ಸ್ಥಳಾಂತರಕ್ಕೆ ವಸತಿ ಸಚಿವ ವಿ.ಸೋಮಣ್ಣ ಸೂಚಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಎಂ.ಗೌತಮ್‌ಕುಮಾರ್‌, ಇಂದಿರಾ ಕ್ಯಾಂಟೀನ್‌ ಅಡುಗೆ ಮಾಡುವುದಕ್ಕೆ ಈಗ ನಿಗದಿಯಾಗಿರುವ ಪ್ರದೇಶ ಕೊಳಚೆ ನಿರ್ಮೂಲನ ಮಂಡಳಿಗೆ ಒಳಪಟ್ಟಿದೆ. ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸುವಂತೆ ಸಾರ್ವಜನಿಕರು ಕೇಳಿದ್ದು, ಸಚಿವರು ಸ್ಪಂದಿಸಿದ್ದಾರೆ. ನಾಯಂಡಹಳ್ಳಿಯಲ್ಲಿರುವ ಅಡುಗೆ ಮನೆಗೆ ಪರ್ಯಾಯವಾಗಿ ಎರಡು ತಿಂಗಳ ಹಿಂದೆ ದೀಪಾಂಜಲಿ ನಗರದಲ್ಲಿ ಬದಲಿ ಕಿಚನ್‌ ನಿರ್ಮಾಣ ಮಾಡಲಾಗಿದೆ ಎಂದರು.

ಚೆಫ್‌ಟಾಕ್‌ನ ಗುತ್ತಿಗೆದಾರರಾದ ಗೋವಿಂದ ಪೂಜಾರಿ ಮಾತನಾಡಿ, ಒಪ್ಪಂದದ ಪ್ರಕಾರ ಹದಿನೈದು ಅಡುಗೆ ಮನೆ ಕೊಡುತ್ತೇವೆ ಎಂದಿದ್ದರು. ಆದರೆ, ನಂತರ ಎಂಟು ಅಡುಗೆ ಮನೆ ನಿರ್ಮಾಣವಾದವು. ಈಗ ಅದರಲ್ಲೂ ಒಂದು ತೆರವು ಮಾಡುತ್ತಿರುವುದರಿಂದ ಆಹಾರ ಪೂರೈಕೆಗೆ ಸಮಸ್ಯೆ ಆಗಲಿದೆ. ಸದ್ಯ ನಾಯಂಡಹಳ್ಳಿಗೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ಕೊಳಚೆ ನಿರ್ಮೂಲನ ಮಂಡಳಿಯ ಜಾಗದಲ್ಲಿ ಅಂದಾಜು 1 ಕೋಟಿ ವೆಚ್ಚದಲ್ಲಿ ಅಡುಗೆ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಇಲ್ಲಿಂದ 15 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಸೋಮವಾರ ಅಡುಗೆ ಕೋಣೆಗೆ ಬೀಗ ಹಾಕಲಾಗಿದ್ದು, ದೀಪಾಂಜಲಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಯಿಂದ ಪಶ್ಚಿಮ ವಲಯದ ವಾರ್ಡ್‌ಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.