ಬೆಂಗಳೂರು(ನ.07): ಸಾರ್ವಜನಿಕರು ಕರವಸ್ತ್ರ ಅಥವಾ ಬಟ್ಟೆಯಿಂದ ಮೂಗು ಹಾಗೂ ಬಾಯಿ ಮುಚ್ಚಿದ್ದರೆ ದಂಡ ವಿಧಿಸಬಾರದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಶುಕ್ರವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು ಹಾಗೂ ಪೊಲೀಸ್‌ ಸಿಬ್ಬಂದಿ ಉದ್ದೇಶಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಶೀತದಿಂದ ಸೀನಿದಾಗ ಹಾಗೂ ಕೆಮ್ಮಿದಾಗ ಸಿಡಿಯುವ ಎಂಜಲಿನ ಹನಿಗಳಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಹಾಗೆಂದು ಬಡ​ವರು ಹಾಗೂ ಆರ್ಥಿ​ಕ​ವಾಗಿ ಅಶಕ್ತರು 50 ಪಾವತಿಸಿ ಮಾಸ್ಕ್‌ ಖರೀ​ದಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಬಟ್ಟೆ ಅಥವಾ ಕರ​ವಸ್ತ್ರದಿಂದ ಮೂಗು ಮತ್ತು ಬಾಯಿ ಮುಚ್ಚಿದ್ದರೂ ಅದನ್ನು ಮಾಸ್ಕ್‌ ಎಂದು ಪರಿ​ಗ​ಣಿ​ಸಬೇಕು ಎಂದು ಹೇಳಿದರು.

ದಂಡದೊಂದಿಗೆ ಅರಿವು ಮೂಡಿಸಿ:

ಮಾರ್ಷಲ್‌ಗಳು ಮಾಸ್ಕ್‌ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜೊತೆಗೆ ಮಾಸ್ಕ್‌ ಧರಿಸದಿದ್ದರೆ ಏನೆಲ್ಲ ಸಮಸ್ಯೆಗಳಾಗುತ್ತವೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಜನದಟ್ಟಣೆ ಹೆಚ್ಚಿರುವ ಮಾರುಕಟ್ಟೆ, ಮಾಲ್‌ಗಳು, ಜಂಕ್ಷನ್‌ಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ದಂಡ ವಿಧಿಸುವಾಗ ಜನಸಾಮಾನ್ಯರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಮಾರ್ಷಲ್‌ಗಳಿಗೆ ಸೂಚಿಸಿದರು.
ಬಿಬಿ​ಎಂಪಿ ವಿಶೇಷ ಆಯುಕ್ತ (ಘ​ನ​ತ್ಯಾಜ್ಯ ನಿರ್ವ​ಹ​ಣೆ) ರಂದೀಪ್‌, ಜಂಟಿ ಆಯುಕ್ತ ಸರ್ಫ​ರಾಜ್‌ ಖಾನ್‌, ಟಾಸ್ಕ್‌ ಪೋರ್ಸ್‌ ತಂಡದ ಹಿರಿಯ ಐಎ​ಎಸ್‌ ಅಧಿ​ಕಾರಿ ನವೀನ್‌ ರಾಜ್‌​ಸಿಂಗ್‌, ಪೂರ್ವ ವಲ​ಯದ ಜಂಟಿ ಆಯುಕ್ತೆ ಕೆ.ಆರ್‌. ಪಲ್ಲವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರಲ್ಲಿ ಬದಲಾಯ್ತು ಮಾಸ್ಕ್ ನಿಯಮ : ಒಬ್ಬರಿಗೆ ಬೇಕಿಲ್ಲ

ತಾಳ್ಮೆ ವಹಿಸಿ: ಕಮಲ್‌ ಪಂತ್‌

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತ​ನಾಡಿ, ಯಾವುದೇ ಹೊಸ ಕಾನೂನು-ನಿಯಮಗಳನ್ನು ಅನುಷ್ಠಾನಗೊಳಿಸುವಾಗ ಸಂಘರ್ಷಗಳು ಉಂಟಾಗುತ್ತವೆ. ಹೀಗಾಗಿ ಮಾರ್ಷಲ್‌ಗಳು ಹಾಗೂ ಪೊಲೀಸರು ತಾಳ್ಮೆ ವಹಿಸಬೇಕು. ನಗರದಲ್ಲಿ ಪ್ರಸ್ತುತ 120 ಮಂದಿ ಪೊಲೀಸ್‌ ಸಿಬ್ಬಂದಿ ಕೊರೋನಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಗತ್ಯಬಿದ್ದರೆ ಸಂಚಾರಿ ಪೊಲೀಸರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ಅಡ್ಡಿ ಪಡಿಸಿದರೆ ಜೈಲು

ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಮಾರ್ಷಲ್‌ಗಳು ಶ್ರಮಿಸುತ್ತಿದ್ದಾರೆ. ಕರ್ತವ್ಯದ ವೇಳೆ ಅಡ್ಡಿಪಡಿಸುವುದು ಅಥವಾ ಅವರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ಒಂದು ವೇಳೆ ಇಂತಹ ಘಟನೆಗಳು ನಡೆದರೆ, ತಪ್ಪಿತಸ್ಥರನ್ನು ಬಂಧಿಸಿ, ಜೈಲಿಗೆ ಶಿಕ್ಷೆಗೆ ಗುರಿಪಡಿಸಲಾಗುವುದು. ಮಾರ್ಷಲ್‌ಗಳಿಗೆ ರಕ್ಷಣೆ ಸೇರಿದಂತೆ ಕೊರೋನಾ ಸೋಂಕು ತಡೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಪೊಲೀಸ್‌ ಇಲಾಖೆ ಸಿದ್ಧವಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಕಮಲ್‌ ಪಂತ್‌ ತಿಳಿಸಿದ್ದಾರೆ.