Bengaluru: ಸೋಮವಾರ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬೆಂಗಳೂರು (ಸೆ.16): ರಾಜ್ಯದ ರಾಜಧಾನಿ ಬೆಂಗಳೂರಿನ ವ್ಯಾಪ್ತಿಯಲ್ಲಿ 'ಗಣೇಶ ಚತುರ್ಥಿ' ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶವನ್ನು ಹೊರಡಿಸಿದೆ. ದಿನಾಂಕ 8-09-2023 ಸೋಮವಾರದಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತವಾಗಿ ಬಿಬಿಎಂಪಿ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಾಂಸ ಮಾರಾಟ ನಿಷೇಧ ಪ್ರತಿ ಲಗತ್ತಿಸಿದೆ.
ಗಣಪತಿ ವಿಸರ್ಜನೆಗೆ ಕಲ್ಯಾಣಿಗಳು, ಸಂಚಾರಿ ಟ್ಯಾಂಕರ್‌ಗಳ ಸ್ಥಾಪನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾಗಿರುವ 63 ಏಕಗವಾಕ್ಷಿ ಕೇಂದ್ರಗಳು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 39 ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 418 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲ ವಾರ್ಡ್ ಗಳಲ್ಲಿ ಮಾಡಲಾಗಿರುತ್ತದೆ.
ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ: ಸದರಿ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅದರ ವಿವರಗಳಿಗಾಗಿ ವೆಬ್ ಸೈಟ್ https://apps.bbmpgov.in/ganesh2023/ ನಲ್ಲಿ ಅಥವಾ ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ ವಿವರವನ್ನು ಪಡೆಯಬಹುದಾಗಿದೆ. ಸದರಿ ಮಾಹಿತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.