ಹುಬ್ಬಳ್ಳಿ(ಜ.17): ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿ ಕೊಟ್ಟಿರುವ ಮಾದರಿಯಲ್ಲೇ ಕರ್ನಾಟಕದಲ್ಲಿ ಬಹುಸಂಖ್ಯಾತವಾಗಿರುವ ಲಿಂಗಾಯತರಿಗೆ ಶೇ.16 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮಹಾರಾಷ್ಟ್ರ ಸರ್ಕಾರ ಪ್ರವರ್ಗ 3 ಬಿಯಲ್ಲಿರುವ ಮರಾಠಾ ಸಮುದಾಯಕ್ಕೆ ಶೇ.16 ರಷ್ಟು ವಿಶೇಷ ಮೀಸಲಾತಿ ನೀಡಿದೆ. ಅದೇ ರೀತಿ ರಾಜ್ಯದಲ್ಲಿನ ಲಿಂಗಾಯತ ಸಮುದಾಯಕ್ಕೆ ಶೇ.16 ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಆ ರಾಜ್ಯದಲ್ಲಿರುವ ಶೇ.52 ಮೀಸಲಾತಿಯಲ್ಲಿ ಯಾವುದೇ ಕಡಿತಗೊಳಿಸದೆ ಮರಾಠಾ ಸಮಾಜಕ್ಕೆ ಶೇ.16 ರಷ್ಟುವಿಶೇಷ ಮೀಸಲಾತಿಯನ್ನು ಡಿ.1ರಿಂದ ಜಾರಿಗೆ ಬರುವಂತೆ ಅಲ್ಲಿಯ ಸರ್ಕಾರ ನೀಡಿದ್ದು, ಮೀಸಲಾತಿ ಪ್ರಮಾಣವನ್ನು ಶೇ.68 ಕ್ಕೆ ಏರಿಕೆ ಮಾಡಿದ್ದರು. ಸುಪ್ರೀಂಕೋರ್ಟ್‌ 2010 ರಂದು, ಖಚಿತ ವೈಜ್ಞಾನಿಕ ದಾಖಲೆ ಇದ್ದಲ್ಲಿ ಸರ್ಕಾರವು ಮೀಸಲು ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಬಹುದು ಎಂಬ ಆದೇಶ ನೀಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಅಲ್ಲಿಯ ಬಹುಸಂಖ್ಯಾತ ಹಿಂದೂ ಮರಾಠಾ ಸಮಾಜಕ್ಕೆ ಈ ಕೊಡುಗೆ ನೀಡಿದೆ. ರಾಜ್ಯದ ಬೇರೆ ಬೇರೆ ಸಮಾಜದವರು ತಮ್ಮ ಸಮಾಜದ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಬೇಡಿಕೆ ಇಟ್ಟಿರುವಾಗ, ಲಿಂಗಾಯತ ಸಮಾಜದಲ್ಲೂ ಶೇ.80 ರಷ್ಟು ಬಡವರಿದ್ದಾರೆ. ಈ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣ ಶೇ.16ಕ್ಕೆ ಹೆಚ್ಚಿಸಬೇಕೆಂಬುದು ಈ ಸಮಾಜದ ಒಟ್ಟಾಭಿಪ್ರಾಯ ಎಂದು ಹೊರಟ್ಟಿ ಹೇಳಿದ್ದಾರೆ.