'ಸಿಎಂ ಬದಲಾದಾಗ ಸಿದ್ದರಾಮಯ್ಯ ಪ್ಲಾನ್ ಉಲ್ಟಾ ಆಯ್ತು'
- ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ
- ಬೊಮ್ಮಾಯಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದ ಸಚಿವ ಸೋಮಶೇಖರ್
ಮೈಸೂರು (ಆ.15): ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ ಎಂದು ಸಚಿವ ಎಸ್. ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿಂದು ಮಾತನಾಡಿದ ಸಚಿವ ಸೋಮಶೇಖರ್ ಬೊಮ್ಮಾಯಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸಿಎಂ ಬದಲಾದಾಗ ಸಿದ್ದರಾಮಯ್ಯ ಬೇರೆ ಪ್ಲಾನ್ ನಲ್ಲಿ ಇದ್ದರು. ಏನೇನೋ ಆಗಿ ಬಿಡುತ್ತದೆ ಎಂದು ಲೆಕ್ಕ ಹಾಕಿಕೊಂಡಿದ್ದರು. ಅವರ ಯಾವ ಪ್ಲಾನ್ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸುಮ್ಮನೆ ಸರ್ಕಾರ ಅಲ್ಪಾವಧಿಯ ಅಂತ ಹೇಳುತ್ತಿದ್ದಾರೆ ಎಂದರು.
ಸಿಎಂ ಬೊಮ್ಮಾಯಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಗೆ ವಿಷಯಗಳೇ ಇಲ್ಲ. ಒಂದಿಬ್ಬರ ಹೇಳಿಕೆಯನ್ನು ಹಿಡಿದುಕೊಂಡು ಸರ್ಕಾರದ ಸ್ಥಿರತೆ ಬಗ್ಗೆ ಚರ್ಚೆ ಮಾಡುವುದು ಬೇಡ. ಸಿಎಂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ ಎಂದರು.
ಬೊಮ್ಮಾಯಿ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನಗೊಳ್ಳಬಹುದು: ಹೀಗೊಂದು ಭವಿಷ್ಯ
ಇನ್ನು ಚಾಮರಾಜ ಕ್ಷೇತ್ರದ ಶಾಸಕ ರಾಮದಾಸ್ ಹಿರಿಯರಿದ್ದಾರೆ. ಅವರು ಸರ್ಕಾರಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಅಸಮಾಧಾನದ ವಿಚಾರ ದೊಡ್ಡದಾಗಿಲ್ಲ ಎಂದು ಪ್ರತಿಕ್ರಿಯಿಸಿದರು.
ನಾನು ಮೊದಲ ಅವಧಿ ಮುಗಿದ ಮೇಲೆ ಮೈಸೂರಿಗೆ ಧನ್ಯತಾ ಪತ್ರ ಬರೆದಿದ್ದೆ. ಆದರೆ ರಾಜಕಾರಣ ಕೆಲವೊಮ್ಮೆ ಬದಲಾಗುತ್ತದೆ. ಈಗ ಮತ್ತೆ ಅವಕಾಶ ಸಿಕ್ಕಿದೆ. ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರಿಸುವೆ. ನಮ್ಮಿಂದ ಎಂದೂ ಅವರಿಗೆ ತೊಂದರೆ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.