ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!
ಬೆಂಗಳೂರಿನ ಬಸವನಗುಡಿ ಠಾಣೆಯ ಪಿಎಸ್ಐ ವೈದ್ಯೆಯೊಬ್ಬರ ಸ್ನೇಹ ಬೆಳೆಸಿ 1.71 ಲಕ್ಷ ರೂ. ಪಡೆದು ನಗ್ನ ಫೋಟೋ ಕೇಳಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.
ಬೆಂಗಳೂರು (ನ.14): ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯೆಯ ಸ್ನೇಹ ಬೆಳೆಸಿಕೊಂಡು, ಪ್ರೀತಿಯ ಬಲೆಗೆ ಬೀಳಿಸಿಕೊಂಡ ಬಸವನಗುಡಿ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಾನು ಪ್ರೀತಿಸುವ ವೈದ್ಯೆಯಿಂದ 1.71 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದಲ್ಲದೇ ಅವರ ನಗ್ನ ಫೋಟೋ ಕೇಳಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ಬಸವನಗುಡಿ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜಕುಮಾರ ಎಸ್ ಜೋಡಟ್ಟಿ ಅವರ ವಿರುದ್ದ ಮಹಿಳಾ ವೈದ್ಯರೊಬ್ಬರು ದೂರು ನೀಡಿದ್ದಾರೆ. ನಗರದ ಖಾಸಗಿ ಆಸ್ಪತ್ರೆ ವೈದ್ಯೆಯಾಗಿರುವ ಯುವತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡದೇ ಸೀದಾ ಬೆಂಗಳೂರು ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ತನ್ನೊಂದಿಗೆ ಹಲವು ವರ್ಷಗಳಿಂದ ಸ್ನೇಹದಿಂದ ಹಾಗೂ ಪ್ರತೀಯಿಂದ ಇದ್ದ ಪಿಎಸ್‌ಐ ರಾಜಕುಮಾರ ಅವರು ನನ್ನಿಂದ ಹಣವನ್ನು ಪಡೆದು, ಇದೀಗ ಮದುವೆ ಮಾಡಿಕೊಳ್ಳುವ ಮೊದಲು ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ 2020ರಲ್ಲಿ ಪಿಎಸ್‌ಐ ರಾಜಕುಮಾರ ಅವರಿಗೆ ಈ ಯುವತಿ ಪರಿಚಿತವಾಗಿದ್ದಳು. ಆಗ ಈ ಯುವತಿ ರಾಜ್ಯದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಇದೇ ಅವಧಿಯಲ್ಲಿ ರಾಜಕುಮಾರ ಅವರು ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್‌ಐ ತರಬೇತಿ ಪಡೆಯುತ್ತಿದ್ದರು. ಫೇಸ್‌ಬುಕ್‌ನಲ್ಲಿ ಪರಿಚಿತವಾದ ಇರಿಬ್ಬರ ನಡುವೆ ಆರಂಭದಲ್ಲಿ ಸ್ನೇಹ ಬೆಳೆದಿದೆ. ನತರದ ದಿನಗಳಲ್ಲಿ ಇವರ ಸ್ನೇಹ ಪರಸ್ಪರ ಪ್ರೀತಿಗೆ ತಿರುಗಿದೆ. ನಂತರ ಇಬ್ಬರ ನಡುವಿನ ಸಲುಗೆ ಹೆಚ್ಚಾಗಿದ್ದು, ಹತ್ತಿರವಾಗಿದ್ದಾರೆ.
ಇದನ್ನೂ ಓದಿ: ಸಂಪಿಗೆ ಥಿಯೇಟರ್ ಮಾಲೀಕರ ಮನೆಯಲ್ಲಿ 1.5 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ನೇಪಾಳಿ ಗ್ಯಾಂಗ್!
ಇದಾದ ನಂತರ ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರಿಂದ ಇದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಪಿಎಸ್‌ಐ ರಾಜ್‌ಕುಮಾರ್ ವೈದ್ಯೆಯಿಂದ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ನಗ್ನ ಪೊಟೋ ಕಳಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ವೈದ್ಯೆ ಆರೋಪ ಮಾಡಿದ್ದಾರೆ. ಇದನ್ನ ನಿರಾಕರಿಸಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಜೊತೆಗೆ, ವೈದ್ಯೆಯ ಜೊತೆಗೆ ಪ್ರೀತಿಯಿಂದ ಮಾತನಾಡಿದ್ದಾಗ ಫೋನ್ ಕಾಲ್ ರೆಕಾರ್ಡ್ ಸಂಗ್ರಹಿಸಿ ಇಟ್ಟುಕೊಂಡು ಇದೀಗ ಆ ಆಡಿಯೋವನ್ನು ಮುಂದಿಟ್ಟುಕೊಂಡು ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದ ವೈದ್ಯೆ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ಸಲ್ಲಿಕೆ ಮಾಡಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.