Asianet Suvarna News Asianet Suvarna News

ಪಂಚಮಸಾಲಿ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಿ: ಬಸವ ಜಯ ಮೃತ್ಯುಂಜಯ ಶ್ರೀ

ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ, ಸಿದ್ದು ಸವದಿಗೆ ಸಚಿವ ಸ್ಥಾನ ನೀಡಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಆಗ್ರಹ|ಬಸನಗೌಡ ಪಾಟೀಲ ಯತ್ನಾಳ ಕೇವಲ ಲಿಂಗಾಯತ ಅಷ್ಟೇ ಅಲ್ಲದೇ ರಾಜ್ಯದ ಪ್ರಭಾವಿ ನಾಯಕ ಆಗಿದ್ದಾರೆ| ಯಡಿಯೂರಪ್ಪ ಕಷ್ಟಕಾಲದಲ್ಲಿ ಯತ್ನಾಳ ಸಾಥ್‌|

Basava Jaya Mrutunjaya Swamiji Demand for Minister Posts to Panchamasali Community
Author
Bengaluru, First Published Dec 21, 2019, 11:02 AM IST

ವಿಜಯಪುರ(ಡಿ.21): ನಾಡ ರಕ್ಷಣೆಗಾಗಿ ಹೋರಾಡಿದ ವೀರರಾಣಿ ಕಿತ್ತೂರ ಚನ್ನಮ್ಮ ಅವರ 241ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಡಿ. 29ರಂದು ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ವಿಜಯಪುರದ ಐಶ್ವರ್ಯ ನಗರದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಕಿತ್ತೂರು ಚನ್ನಮ್ಮ ಅವರ ಜಯಂತ್ಯುತ್ಸವವನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ದ ಜಿಲ್ಲಾ ಘಟಕ ಹಾಗೂ ವೀರ ರಾಣಿ ಕಿತ್ತೂರು ಚನ್ನಮ್ಮ ಸಮುದಾಯ ಭವನ ಆಡಳಿತ ಮಂಡಳಿ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಿತ್ತೂರು ರಾಣಿ ಚನ್ನಮ್ಮ ಜಯಂತಿ 2017ರಿಂದ ಸರ್ಕಾರ ವತಿಯಿಂದ ಆಚರಿಸಲಾಗುತ್ತದೆ. ಆದರೆ ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ನೆರೆ ಹಾವಳಿಯಿಂದ ಜನ್ಮದಿನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಣೆಗೆ ಸರ್ಕಾರ ನೀಡುವ . 70 ಲಕ್ಷ ಅನುದಾನದಲ್ಲಿ ಬಹುಪಾಲನ್ನು ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ ಅರ್ಪಿಸಿ ಸರಳವಾಗಿ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಜಯಂತ್ಯುತ್ಸವದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 60 ವಿದ್ಯಾರ್ಥಿಗಳಿಗೆ ಲಿಂಗೈಕ್ಯ ಬಿ.ಎಸ್‌. ಪಾಟೀಲ ಮನಗೂಳಿ ಹಾಗೂ ಲಿಂಗೈಕ್ಯ ಜೆ.ಎಸ್‌. ದೇಶಮುಖ ನಾಲತವಾಡ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡ​ಲಾ​ಗು​ವುದು ಎಂದರು.

ಬುತ್ತಿ ಮೆರವಣಿಗೆ:

ಮೊದಲ ಬಾರಿಗೆ ರೈತ ಮಹಿಳೆಯ ಶ್ರಮದ ಪ್ರತೀಕವಾಗಿ ಕುಂಭಮೇಳದ ಬದಲಾಗಿ ‘ಬುತ್ತಿ’ ಮೆರವಣಿಗೆ ನಡೆಸಲಾಗುವುದು. ರಾಣಿ ಚನ್ನ​ಮ್ಮನವ​ರ ಭಾವಚಿತ್ರದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ‘ಬುತ್ತಿ’ಯನ್ನು ತಲೆಯ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಸಿದ್ಧೇಶ್ವರ ದೇವಾಲಯದಿಂದ ಆರಂಭಗೊಳ್ಳುವ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದೆ. ಮಾಜಿ ಸಚಿವ ಎಂ.ಸಿ. ಮನಗೂಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ನಂತರ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಲಿರುವ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವನ್ನು ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯರು, ಆಸಂಗಿಹಾಳದ ಶಂಕರಾನಂದ ಸ್ವಾಮೀಜಿ, ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಅಥರ್ಗಾದ ವಚನಶ್ರೀ ಮಾತಾಜಿ, ಮಾತೋಶ್ರೀ ನೀಲಮ್ಮ ಮಾತಾಜಿ ವಹಿಸಲಿದ್ದಾರೆ ಎಂದರು.
ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಶಿವಾನಂದ ಪಾಟೀಲ, ಮುರುಗೇಶ ನಿರಾಣಿ ಅವರು ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ದೇವರಹಿಪ್ಪರಗಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡಲಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾದ ಶಂಕರಗೌಡ, ಡಾ. ಎಂ.ಎಸ್‌. ಝಳಕಿ, ಸುರೇಶ ಶೇಡಶ್ಯಾಳ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪಂಚಮಸಾಲಿ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಿ

ಹಿರಿಯ ನಾಯಕರಾಗಿರುವ ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ, ಸಿದ್ದು ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಆಗ್ರಹಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 15ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದವ​ರಲ್ಲಿ ಕೊಂಚ ಅಸಮಾಧಾನ ಇದೆ. ಹೀಗಾಗಿ ಈ ಬಾರಿ ಸಚಿವ ಸಂಪುಟದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಮಾಜ ಆಗ್ರಹಿಸುತ್ತಿದೆ ಎಂದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇವಲ ಲಿಂಗಾಯತ ಅಷ್ಟೇ ಅಲ್ಲದೇ ರಾಜ್ಯದ ಪ್ರಭಾವಿ ನಾಯಕ ಆಗಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರ ಕಷ್ಟಕಾಲದಲ್ಲಿ ಯತ್ನಾಳ ಸಾಥ್‌ ನೀಡಿದ್ದಾರೆ. ಹಿರಿಯ ನಾಯಕರ ಕೋಟಾ, ರೈತ ಕೋಟಾ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ವಿಷಯವಾಗಿ ಯತ್ನಾಳ ಅವರು ತೋರಿದ ಬದ್ಧತೆಗೆ ಇಡೀ ನಾಡು ಅವರನ್ನು ಪ್ರಶಂಸೆ ವ್ಯಕ್ತಪಡಿಸಿತ್ತು. ಅದೇ ತೆರನಾಗಿ ಮುರುಗೇಶ ನಿರಾಣಿ ಸಹ ಪ್ರಭಾವಿ ನಾಯಕ, ಸಿದ್ದು ಸವದಿ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾನು ಸಂಪೂರ್ಣವಾಗಿ ಅಧ್ಯಯನ ಮಾಡಿಲ್ಲ. ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ತೊಡಗಿದ್ದೇನೆ. ಹೀಗಾಗಿ ಗಮನಿಸಲು ಆಗಿಲ್ಲ. ಆದ್ದರಿಂದ ಈ ಕಾಯ್ದೆ ಕುರಿತು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರವೇ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸೂಕ್ತ. ಹೀಗಾಗಿ ಕಾನೂನು ತಜ್ಞರಿಂದ ಕಾಯ್ದೆಯ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಈ ಬಗ್ಗೆ ಪ್ರತಿಕ್ರಿಯೆ ನೀಡುವೆ. ಈ ನಿಟ್ಟಿನಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು ಎಂದು ವಿನಂತಿಸಿದರು.
 

Follow Us:
Download App:
  • android
  • ios