ಹನ್ನೊಂದು ದಿನ ಕಾಲ ನಡೆಯುವ ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ (ಶುಕ್ರವಾರ) ಇಂದು ರಾತ್ರಿ 11 ಗಂಟೆಗೆ ಧ್ವಜಾರೋಹಣ ಮುಖಾಂತರ ಅಧಿಕೃತ ಚಾಲನೆ ದೊರೆಯಲಿದ್ದು, ಏ.12ರ ಚೈತ್ರ ಪೌರ್ಣಮಿಯಂದು ಕರಗ ಉತ್ಸವ ನಡೆಯಲಿದೆ.
ಬೆಂಗಳೂರು (ಏ.04): ಹನ್ನೊಂದು ದಿನ ಕಾಲ ನಡೆಯುವ ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ (ಶುಕ್ರವಾರ) ಇಂದು ರಾತ್ರಿ 11 ಗಂಟೆಗೆ ಧ್ವಜಾರೋಹಣ ಮುಖಾಂತರ ಅಧಿಕೃತ ಚಾಲನೆ ದೊರೆಯಲಿದ್ದು, ಏ.12ರ ಚೈತ್ರ ಪೌರ್ಣಮಿಯಂದು ಕರಗ ಉತ್ಸವ ನಡೆಯಲಿದೆ. ಕರಗ ಮಹೋತ್ಸವಕ್ಕೆ ಈಗಾಗಲೇ ಧರ್ಮರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಸಿಬ್ಬಂದಿ ದೇವಾಲಯ, ರಥ ಶುಚಿಗೊಳಿಸುತ್ತಿದ್ದಾರೆ. ದೇವಸ್ಥಾನ ಹಾಗೂ ರಸ್ತೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಶುಕ್ರವಾರ ರಾತ್ರಿ 10ಕ್ಕೆ ಧ್ವಜಾರೋಹಣ ಹಾಗೂ ರಥೋತ್ಸವದ ಮೂಲಕ ಚಾಲನೆ ನೀಡಲಾಗುತ್ತದೆ. ಏ.5 ರಿಂದ ಏ.8 ವರೆಗೆ ರಾತ್ರಿ 7.30ಕ್ಕೆ ‘ವಿಶೇಷ ಪೂಜೆ’, ‘ಮಹಾಮಂಗಳಾರತಿ’ ಕಾರ್ಯಕ್ರಮ ಜರುಗಲಿವೆ. ಏ.9ರ ಬುಧವಾರ ರಾತ್ರಿ 3ಕ್ಕೆ ‘ಆರತಿ ದೀಪ’, ಏ.10ರ ಗುರುವಾರ ರಾತ್ರಿ 3ಕ್ಕೆ ‘ಹಸಿ ಕರಗ’ ಹಾಗೂ ಏ.12ರ ಶನಿವಾರ ರಾತ್ರಿ 12.30ಕ್ಕೆ ‘ಕರಗ ಶಕ್ತ್ಯೋತ್ಸವ’ ನಡೆಯಲಿದೆ.
ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಕರಗ ಮಹೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ಏ.13ರ ಭಾನುವಾರ ರಾತ್ರಿ 2ಕ್ಕೆ ‘ಪುರಾಣ ಪ್ರವಚನ’, ‘ದೇವಾಲಯದ ಗಾವು ಶಾಂತಿ’ ಹಾಗೂ ಏ.14ರ ಸೋಮವಾರ ಸಂಜೆ 4ಕ್ಕೆ ‘ವಸಂತೋತ್ಸವ ಧ್ವಜಾರೋಹಣ’ ಮೂಲಕ ಕರಗ ಉತ್ಸವ ಪರಿಸಮಾಪ್ತಿಯಾಗಲಿದೆ.
ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಬೆಲೆ ಏರಿಕೆ ಅಸ್ತ್ರ: ಎಂಟಿಬಿ ನಾಗರಾಜ್ ವಾಗ್ದಾಳಿ
ವೈಟ್‌ಟಾಪಿಂಗ್ ಪೂರ್ಣಕ್ಕೆ ಒತ್ತಾಯ: ಧರ್ಮರಾಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಬಿಬಿಎಂಪಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಶುಕ್ರವಾರದಿಂದ ಕರಗ ಉತ್ಸವದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿವೆ. ಏ.12ಕ್ಕೆ ಕರಗ ಉತ್ಸವ ನಡೆಯಲಿದೆ. ಅಷ್ಟರೊಳಗೆ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸುವಂತೆ ಕರಗ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತರು ಆಗ್ರಹಿಸಿದ್ದಾರೆ.
