ಮೈಸೂರು [ಅ.03]: ಬಂಡಿಪುರ ರಾತ್ರಿ ಸಂಚಾರ ತೆರವು ವಿಚಾರವಾಗಿ ನಾನು ನ್ಯಾಯಾಲಯವನ್ನು ಮೀರಿ ನಡೆಯೋಕಾಗಲ್ಲ ಎಂದು ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಇಲ್ಲಿರುವ ರಾತ್ರಿ ಸಂಚಾರ ನಿಷೇಧ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿಷೇಧ ತೆರವಿಗೆ ಒತ್ತಾಯಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಸದ ರಾಹುಲ್‌ ಗಾಂಧಿ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನ್ಯಾಯಾಲಯವು ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಬೇಡ ಅಂದಿದ್ದೆ. ಹೀಗಾಗಿ, ನ್ಯಾಯಾಲಯ ಆದೇಶ ರಾಹುಲ್‌ ಗಾಂಧಿ ಅವರಿಗೆ ಗೊತ್ತಿದೆ ಅಂದುಕೊಳ್ಳುತ್ತೇನೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇವೇಳೆ ಸುತ್ತೂರುಶ್ರೀ ಪೋನ್‌ ಕದ್ದಾಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಯಾರ ಪೋನ್‌ ಕದ್ದಾಲಿಕೆ ಆಗಿದ್ದರೂ ಸತ್ಯ ಹೊರ ಬರಲಿದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ನಂತರ ಆ ಬಗ್ಗೆ ಮಾತನಾಡುತ್ತೇನೆ. ಸುತ್ತೂರು ಶ್ರೀಗಳ ಪೋನ್‌ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.