Asianet Suvarna News Asianet Suvarna News

'ಮೆಡಿಕಲ್ ಕಾಲೇಜು, ಕನ್ನಡಿಯೊಳಗಿನ ಗಂಟು' : ಜುಲೈ 10 ರಂದು ಯಾದಗಿರಿ ಬಂದ್?

ಜುಲೈ 10 ರಂದು ಯಾದಗಿರಿ ಬಂದ್?| ರಾಜಕೀಯ ಕ್ಷಿಪ್ರಕ್ರಾಂತಿ : ‘ಬಂದ್’ ಅಬಾಧಿತ| ಯಾದಗಿರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹ| 10 ರಂದು ‘ಯಾದಗಿರಿ ಬಂದ್’ ಕರೆ| ‘ಬಂದ್’ಗೆ ಸಂಘಟನೆಗಳು, ನಾಗರಿಕರು, ವರ್ತಕರು, ಆಟೋ ಯೂನಿಯನ್ ಬೆಂಬಲ| ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ ಕಲಬುರಗಿಯಲ್ಲೂ ಪತ್ರ ಚಳವಳಿ

Bandh called on July 10 demanding medical college to Yadagiri
Author
Bangalore, First Published Jul 8, 2019, 5:13 PM IST

ಯಾದಗಿರಿ[ಜು.08]: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರಕ್ರಾಂತಿ, ನಾಟಕೀಯ ಬೆಳವಣಿಗೆಗಳು, ಶಾಸಕರುಗಳ ರಾಜೀನಾಮೆ, ಸರ್ಕಾರದ ಅಸ್ತಿತ್ವದ ಪ್ರಶ್ನೆಗಳ ಮಧ್ಯೆಯೂ, ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಜುಲೈ 10 ರಂದು ಕರೆ ನೀಡಲಾಗಿರುವ ‘ಯಾದಗಿರಿ ಬಂದ್’ ಪ್ರತಿಭಟನೆ ಖಚಿತ ಎಂದು ಶಾಸಕ ವೆಂಕಟರೆಡ್ಡಿ ಮದ್ನಾಳ್ ಸ್ಪಷ್ಟಪಡಿಸಿದ್ದಾರೆ.

ಇತ್ತ, ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ, ಕಲಬುರಗಿಯಲ್ಲಿಯೂ ಸಹ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಶ್ರೀರಾಮ ಸೇನೆ ಜಂಟಿಯಾಗಿ ಪತ್ರ ಚಳವಳಿ ನಡೆಸಲಾಗಿದೆ. ಎಂ. ಎಸ್. ಪಾಟೀಲ್ ನರಿಬೋಳ್ ನೇತೃತ್ವದಲ್ಲಿ ಕಲಬುರಗಿಯ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಅಂಚೆ ಚಳವಳಿ ನಡೆಸಲಾಯಿತು.

ಲಕ್ಷ್ಮೀಕಾಂತ ಸ್ವಾಧಿ, ಶ್ವೇತಾ ಓಂಪ್ರಕಾಶ್, ಮಂಜುನಾಥ ಅಂಕಲಗಿ, ಶಿವಕುಮಾರ ಪಾಟೀಲ್, ವೀರೇಂದ್ರ ಮುಂಟಾಳೆ, ಮಹೇಶ ಕೆಂಭಾವಿ, ಸಂಪಣ್ಣ ಕಿಣಗಿ, ಮಹಾದೇವ ಮಳ್ಳಿ, ಮಡಿವಾಳಪ್ಪ ಅಮರಾವತಿ, ನಿತಿನ್, ಪಂಪಣ್ಣ, ರಮೇಶ, ಸಿದ್ಧಾರ್ಥ ಮುಂತಾದವರಿದ್ದರು.

* ಬಂದ್ ಖಚಿತ : ಮುದ್ನಾಳ್

ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆ ನಿರ್ಧಾರವನ್ನು ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಶಾಸಕರುಗಳಾದ ವೆಂಕಟರೆಡ್ಡಿ ಮುದ್ನಾಳ್ ಹಾಗೂ ನರಸಿಂಹ ನಾಯಕ್ (ರಾಜೂಗೌಡ) ನೇತೃತ್ವದಲ್ಲಿ ಕರೆ ನೀಡಲಾಗಿರುವ ‘ಯಾದಗಿರಿ ಬಂದ್’ ಪ್ರತಿಭಟನೆಗೆ ವಿವಿಧೆಡೆಯಿಂದ ವ್ಯಾಪಕ ಬೆಂಬಲಗಳು ವ್ಯಕ್ತವಾಗುತ್ತಿದೆ.

 ಈ ಮಧ್ಯೆ, ರಾಜಕೀಯ ಅನಿಶ್ಚತತೆ ಹಾಗೂ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬೆಳವಣಿಗೆಗಳಿಂದಾಗಿ ೧೦ ರಂದು ಕರೆ ನೀಡಲಾಗಿರುವ ‘ಯಾದಗಿರಿ ಬಂದ್’ ನಡೆಯುತ್ತದೆಯೇ ಅನ್ನೋ ಅನುಮಾನಗಳಿಗೆ ಶಾಸಕ ಮುದ್ನಾಳ್ ತೆರೆ ಎಳೆದಿದ್ದಾರೆ.

ಯಾವುದೇ ಕಾರಣಕ್ಕೂ ಬಂದ್ ಪ್ರತಿಭಟನೆ ಮುಂದೂಡಲ್ಲ ಎಂದು ಭಾನುವಾರ ಮಧ್ಯಾಹ್ನ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ ಅವರು, ಇದು ಪಕ್ಷ ಪಕ್ಷಗಳ ಪ್ರಶ್ನೆಯಲ್ಲ, ಇದು ಯಾದಗಿರಿ ಜಿಲ್ಲೆಯ ಜನರ ಭಾವನಾತ್ಮಕ ನಂಟಿನ ಹಾಗೂ ಅಭಿವೃದ್ಧಿಪರ ಕಾಳಜಿಯುಳ್ಳ ಹೋರಾಟದ ವಿಷಯವಾದ್ದರಿಂದ ಅಂದು ‘ಬಂದ್’ ನಡೆದೇ ತೀರುತ್ತದೆ ಎಂದಿದ್ದಾರೆ.

ಮೆಡಿಕಲ್ ಕಾಲೇಜು ವಿಚಾರದಲ್ಲಿ ಎಲ್ಲರೂ ಒಂದಾಗಬೇಕಿದೆ. ಸಂಘ ಸಂಸ್ಥೆಗಳು, ಸಂಘಟನೆಗಳು, ಜನ ಸಾಮಾನ್ಯರು, ವ್ಯಾಪಾರಸ್ಥರು ಸೇರಿದಂತೆ ಅನೇಕರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ ಎಂದ ಅವರು, ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡು, ಬರಬೇಕೆಂದು ಪಕ್ಷದ ನಾಯಕರ ಸೂಚನೆ ಎದುರಾದರೂ ಸಹ, ‘ಬಂದ್’ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರವೇ ಮುಂದಿನ ಕೆಲಸ ಎಂದು ತಿಳಿಸಿದರು.

* ವಿವಿಧ ಸಂಘಟನೆಗಳ ಜೊತೆ ಸಭೆ :

ಇನ್ನು, ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಜೊತೆ ಪೂರ್ವಭಾವಿಯಾಗಿ ಶುಕ್ರವಾರ ಸಭೆ ನಡೆಸಿದ ಶಾಸಕ ಮುದ್ನಾಳ್, ರಾಜ್ಯ ಸರ್ಕಾರದಿಂದ ಆಗುತ್ತಿರುವ ಮಲತಾಯಿ ಧೋರಣೆಯನ್ನು ಎಲ್ಲರೂ ಸ್ವಯಂ ಪ್ರೇರಣೆಯಿಂದ ಖಂಡಿಸಿ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ ಅವರು, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಶಾಂತಿಯುತ ಹೋರಾಟ ನಡೆಸಬೇಕಿದೆ ಎಂದರು.

ಬುಧವಾರ ಜು.೧೦ ರಂದು ಯಾದಗಿರಿ ನಗರದ ಮೈಲಾಪೂರ ಬೇಸ್ ನಿಂದ ಮಹಾತ್ಮಾ ಗಾಂಧೀಜಿ ವತ್ತದ ಮಾರ್ಗವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಭಾಗಿಯಾಗಬೇಕೆಂದು ಅವರು ಮನವಿ ಮಾಡಿದರು.

ಬಂದ್ ಕರೆಗೆ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದು, ಇನ್ನುಳಿದಂತೆ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಪ್ರತಿಯೊಬ್ಬ ಸಾರ್ವಜನಿಕರು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಅನ್ಯಾಯ ಖಂಡಿಸಿ ಹೋರಾಟಕ್ಕೆ ಧುಮುಕಬೇಕೆಂದು ಅವರು ಮನವಿ ಮಾಡಿದರು.

ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ಕರ್ನಾಟಕ ರಣಧೀರ ಪಡೆಯ ಜಿಲ್ಲಾಧ್ಯಕ್ಷ ಡಿ. ಭಾಸ್ಕರ್ ಅಲ್ಲೀಪುರ, ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ರಾಠೋಡ ಮುದ್ನಾಳ, ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ ದಾಸನಕೇರಿ, ಜಯ ಕರ್ನಾಟಕ ಸಂಘಟನೆಯ ಮಲ್ಲಿಕಾರ್ಜುನ ಜಲ್ಲಪ್ಪನೋರ್, ಅನಿಲ್ ಮುಂಡ್ರಿಕೆರಿ, ಶಂಕರನಾಗ್ ಆಟೋ ಚಾಲಕರ ಸಂಘದ ಮಲ್ಲಿಕಾರ್ಜುನ ಸಾಂಗ್ಲಿಯಾನ, ಬೆಂಜಮಿನ್ ಶಿವನೂರು, ವಿದ್ಯಾರ್ಥಿ ಮುಖಂಡ ಪವನಕುಮಾರ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇನ್ನಿತರರು ಇದ್ದರು.

Follow Us:
Download App:
  • android
  • ios