Asianet Suvarna News Asianet Suvarna News

ಬೆಂಗಳೂರು ದೇಗುಲಗಳು ವಾರಾಂತ್ಯ ವೇಳೆ ಬಂದ್‌!

* ದೇಗುಲಕ್ಕೆ ಹೋಗೋದು ಕಡಿಮೆ ಮಾಡಿ: ಆಯುಕ್ತ

* ಬೆಂಗಳೂರು ದೇಗುಲಗಳು ವಾರಾಂತ್ಯ ವೇಳೆ ಬಂದ್‌

* ಕೋವಿಡ್‌ ಹೆಚ್ಚಳ ಹಿನ್ನೆಲೆ ಜನರ ಪ್ರವೇಶ ನಿರ್ಬಂಧ

Ban on entry of devotees to temples on weekends and general holidays in Bengaluru pod
Author
Bangalore, First Published Aug 12, 2021, 7:26 AM IST

ಬೆಂಗಳೂರು(ಆ.12): ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಧಾನವಾಗಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಶ್ರಾವಣ ಮಾಸದ ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಸಾರ್ವಜನಿಕರು ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜನರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಈ ಆದೇಶ ಮಾಡಿದ್ದಾರೆ.

ಜನರು ಕೋವಿಡ್‌ ಮಾರ್ಗಸೂಚಿ ಮರೆತು ಸೋಂಕು ಏರಿಕೆಯಾದರೆ ಲಾಕ್ಡೌನ್‌ ಹೇರಬೇಕಾದೀತು ಎಂದು ಬೆಂಗಳೂರು ಉಸ್ತುವಾರಿ ಸಚಿವ ಆರ್‌.ಅಶೋಕ್‌ ಅವರು ಎಚ್ಚರಿಕೆ ನೀಡಿದ ಮಾರನೇ ದಿನವೇ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕಾಗಿ ಆರಂಭಿಕ ಕ್ರಮಗಳನ್ನು ಘೋಷಿಸಿದೆ.

ಇದರ ಬೆನ್ನಲ್ಲೇ, ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜನರು ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜನರು ದೇಗುಲಗಳಿಗೆ ತೆರಳುವುದನ್ನು ಸಾಧ್ಯವಾದಷ್ಟೂಕಡಿಮೆ ಮಾಡಬೇಕು. ಕೊರೋನಾ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?:

ಸಾಲು ಸಾಲು ಹಬ್ಬಗಳು ಎದುರಾಗುತ್ತಿದ್ದು, ದೇವಾಲಯಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಮುಜರಾಯಿ ಹಾಗೂ ಖಾಸಗಿ ದೇವಾಲಯಗಳಲ್ಲಿ ದೈನಂದಿನ ಪೂಜಾ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಶ್ರಾವಣ ಮಾಸದ ಶನಿವಾರ ಮತ್ತು ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ.

ಈ ದಿನಗಳಲ್ಲಿ ಅರ್ಚಕರು ಹಾಗೂ ಸಿಬ್ಬಂದಿ ದೇವಾಲಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ದಿನ ದೇವಾಲಯಗಳಲ್ಲಿ ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲು ಎಲ್ಲ ತಾಲೂಕು ತಹಸೀಲ್ದಾರ್‌ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ.

Follow Us:
Download App:
  • android
  • ios