ಬೆಂಗಳೂರು :  ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಸುಕಿನ ಗುದ್ದಾಟ ಬೆಂಗಳೂರು ಹಾಲು ಒಕ್ಕೂಟ(ಬಮೂಲ್‌)ದ ಅಧ್ಯಕ್ಷರ ಆಯ್ಕೆಗೂ ಕಾಲಿಟ್ಟಿದ್ದು, ಬಮೂಲ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯನ್ನು ಚುನಾವಣೆಗೆ ಕೆಲವೇ ಗಂಟೆಗಳು ಇರುವಾಗ ನಿರ್ದೇಶಕ ಸ್ಥಾನದಿಂದ ವಜಾ ಮಾಡಲಾಗಿದ್ದರೆ, ಕೋರಂ ಕೊರತೆ ನಿರ್ಮಾಣವಾಗಿ ಚುನಾವಣೆಯೇ ಮುಂದೂಡಿಕೆ ಕಂಡಿದೆ!

ಬಮೂಲ್‌ ನೂತನ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, ಅದರಲ್ಲಿ ಕಾಂಗ್ರೆಸ್‌ ಬೆಂಬಲಿತ ಏಳು ಮತ್ತು ಬಿಜೆಪಿ, ಜೆಡಿಎಸ್‌ ಬೆಂಬಲಿತ ತಲಾ ಮೂರು ನಿರ್ದೇಶಕರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಇಲ್ಲಿ ಯಾರ ಬೆಂಬಲವೂ ಇಲ್ಲದೇ ಬಮೂಲ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಖ್ಯಾಬಲ ಹೊಂದಿತ್ತು. ಆದರೆ ಮೈತ್ರಿ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್‌ ನಾಯಕರ ವಿಶ್ವಾಸ ಪಡೆದು ನರಸಿಂಹಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿತ್ತು.

ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಬಮೂಲ್‌ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸಲು ಮುಖ್ಯಮಂತ್ರಿಗಳು ಕೂಡ ಒಪ್ಪಿಗೆ ನೀಡಿದ್ದರು. ಆದರೆ, ರಾತ್ರೋ ರಾತ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನರಸಿಂಹಮೂರ್ತಿ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಲಾಗಿದ್ದು, ಇದರ ಹಿಂದೆ ಜೆಡಿಎಸ್‌ ಸಚಿವ ಎಚ್‌.ಡಿ.ರೇವಣ್ಣ ಅವರ ಕೈವಾಡ ಇದೆ ಎಂದು ಕಾಂಗ್ರೆಸ್‌ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಮಾಹಿತಿ ಗೊತ್ತಿದ್ದರೂ ಸುಮ್ಮನಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಗಡಿಯ ನರಸಿಂಹಮೂರ್ತಿ ಮಾಜಿ ಶಾಸಕ ಬಾಲಕೃಷ್ಣ ಅವರ ಬೆಂಬಲಿಗ ಎಂಬ ಕಾರಣಕ್ಕೆ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಜೆಡಿಎಸ್‌ ನಾಯಕರು ಕುತಂತ್ರ ನಡೆಸಿದ್ದಾರೆ ಎನ್ನಲಾಗಿದ್ದು, ಹಳೆಯ ಪ್ರಕರಣಕ್ಕೆ ಮರು ಜೀವ ನೀಡಿ ನರಸಿಂಹಮೂರ್ತಿ ಅವರನ್ನು ನಿರ್ದೇಶಕ ಸ್ಥಾನದಿಂದ ಏಕಾಏಕಿ ವಜಾ ಮಾಡಿದ್ದು, ದೊಡ್ಡ ಪ್ರಹಸನಕ್ಕೆ ಕಾರಣವಾಯಿತು.

ಚುನಾವಣೆ ಮುಂದೂಡಿಕೆ ಪ್ರಹಸನ:

ನಿಗದಿಯಂತೆ ಬುಧವಾರ ಬೆಳಗ್ಗೆ 11ಕ್ಕೆ ಚುನಾವಣಾಧಿಕಾರಿ ಕೃಷ್ಣಮೂರ್ತಿ ಅವರು ಬಮೂಲ್‌ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಚಾಲನೆ ನೀಡಿದ್ದರು. ಈ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನರಸಿಂಹಮೂರ್ತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೇ ವೇಳೆಗೆ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿರುವ ಮಾಹಿತಿ ಹೊರಬಿತ್ತು. ಕೂಡಲೇ ಕಾಂಗ್ರೆಸ್‌ ನಾಯಕರು ಕನಕಪುರ ಒಕ್ಕೂಟದಿಂದ ನಿರ್ದೇಶಕರಾಗಿ ಆಯ್ಕೆಯಾದ ಎಚ್‌.ಪಿ.ರಾಜಕುಮಾರ್‌ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದ್ದರು. ವರಿಷ್ಠರ ಸೂಚನೆಯಂತೆ ರಾಜಕುಮಾರ್‌ ಕೂಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ದೇವನಹಳ್ಳಿಯ ಬಿ.ಶ್ರೀನಿವಾಸ್‌ ನಾಮಪತ್ರ ಸಲ್ಲಿಸಿದರು. ಆದರೆ ಚುನಾವಣಾ ಅವಧಿ ಮುಕ್ತಾಯದವರೆಗೆ ಕೇವಲ ಐದಾರು ಮಂದಿ ಮಾತ್ರ ಕೊಠಡಿಯಲ್ಲಿ ಹಾಜರಿದ್ದ ಕಾರಣ ಕೋರಂ ಕೊರತೆಯಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ಘೋಷಿಸಿದರು.

ಅವ್ಯವಹಾರದ ಆರೋಪದಡಿ ವಜಾ

ಮಾಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಸಹಕಾರ ಕಾಯ್ದೆ ಅಡಿ ನೋಂದಣಿ ಆಗಿದೆ. ಆದ್ದರಿಂದ ಸಂಘದ ಎಲ್ಲ ಚಟುವಟಿಕೆಗಳು ಸಹಕಾರಿ ಕಾಯ್ದೆಯಡಿಯಲ್ಲೇ ನಡೆಯುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಈ ಸಂಘಕ್ಕೆ ಕಾರ್ಯದರ್ಶಿ(ಸೆಕ್ರೆಟರಿ) ನೇಮಕ ಮಾಡಿಕೊಳ್ಳುವಾಗ ಸಂಘದ ಅಧ್ಯಕ್ಷರಾಗಿದ್ದ ನರಸಿಂಹಮೂರ್ತಿ ಸಹಕಾರಿ ನಿಯಮ ಪಾಲಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ನರಸಿಂಹಮೂರ್ತಿ ಅವರ ಸಹೋದರ ಕೃಷ್ಣಮೂರ್ತಿ ಅವರೇ ಸಹಕಾರ ಇಲಾಖೆಗೆ ನರಸಿಂಹಮೂರ್ತಿ ವಿರುದ್ಧ ಯುವಕನೊಬ್ಬನಿಂದ ದೂರು ಅರ್ಜಿ ಕೊಡಿಸಿದ್ದರು ಎನ್ನಲಾಗಿದೆ. ಈ ಆಧಾರದಲ್ಲಿ ರಾಮನಗರದ ಸಹಕಾರ ಇಲಾಖೆ ಸಹಾಯಕ ನೋಂದಣಾಧಿಕಾರಿಯವರು ಮಾಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದಿಂದ ನರಸಿಂಹಮೂರ್ತಿ ಅವರನ್ನು ಅನರ್ಹಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ. ಹೀಗಾಗಿ ತನ್ನಿಂದ ತಾನೇ ಬಮೂಲ್‌ ನಿರ್ದೇಶಕ ಸ್ಥಾನದಿಂದಲೂ ನರಸಿಂಹಮೂರ್ತಿ ಅನರ್ಹಗೊಂಡಿದ್ದಾರೆ ಎಂದು ಬಮೂಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನೂನು ಹೋರಾಟ 
ಮಾಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸೆಕ್ರೆಟರಿ ನೇಮಕ ಮಾಡಿಕೊಳ್ಳುವಾಗ ಸಹಕಾರಿ ನಿಯಮ ಪಾಲಿಸಿಲ್ಲ ಎಂದು ಆರೋಪಿಸಿ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ನಾನು ಯಾವುದೇ ದುರುದ್ದೇಶದಿಂದ ಅಥವಾ ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡಿಲ್ಲ. ಸಹಕಾರಿ ಇಲಾಖೆ ಆದೇಶ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತೇನೆ. ಇದೊಂದು ರಾಜಕೀಯ ಪ್ರೇರಿತ ಕೃತ್ಯ.

-ನರಸಿಂಹಮೂರ್ತಿ, ಬಮೂಲ್‌ ಅನರ್ಹಗೊಂಡ ನಿರ್ದೇಶಕ.