Asianet Suvarna News Asianet Suvarna News

Ballari News: ನಿಗೂಢವಾಗಿಯೇ ಉಳಿದ ವಿಮ್ಸ್‌ ಸಾವು ಪ್ರಕರಣ!

  • ನಿಗೂಢವಾಗಿಯೇ ಉಳಿದ ವಿಮ್ಸ್‌ ಸಾವು ಪ್ರಕರಣ!
  • ಎರಡುವರೆ ತಿಂಗಳು ಕಳೆದರೂ ವರದಿ ಬಹಿರಂಗವಾಗಲಿಲ್ಲ
  • ಬೆಂಗಳೂರಿನಿಂದ ತನಿಖಾ ತಂಡ ಆಗಮಿಸಿ ಪರಿಶೀಲಿಸಿತ್ತು
  • ವರದಿ ಏನಾಯಿತು ಎಂಬ ಸಾರ್ವಜನಿಕರ ಕುತೂಹಲ
Ballari VIMS death case remains a mystery rav
Author
First Published Nov 27, 2022, 12:59 PM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ ನ.(27) : ರಾಜ್ಯದ ಗಮನ ಸೆಳೆದಿದ್ದ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ತೀವ್ರ ನಿಗಾ ಘಟಕದಲ್ಲಿದ್ದ ಇಬ್ಬರು ರೋಗಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆ ಇನ್ನೂ ನಿಗೂಢವಾಗಿಯೇ ಉಳಿದಿದೆ!

ಘಟನೆ ಜರುಗಿ ಎರಡೂವರೆ ತಿಂಗಳು ಕಳೆದರೂ ತನಿಖಾ ಸಮಿತಿ ನೀಡಿದ ವರದಿಯ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಈ ವರೆಗೆ ಬಹಿರಂಗಪಡಿಸಿಲ್ಲ. ಇದು ಸಹಜವಾಗಿಯೇ ಸಾರ್ವಜನಿಕರಲ್ಲಿ ಗುಮಾನಿ ಮೂಡಿಸಿದೆ. ಬೆಂಗಳೂರಿನಿಂದ ಆಗಮಿಸಿದ್ದ ತನಿಖಾ ತಂಡ ಒಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿತ್ತು. ಆದರೆ, ವಿಮ್ಸ್‌ ಸಾವು ಪ್ರಕರಣದ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈವರೆಗೆ ತುಟಿ ಬಿಚ್ಚಿಲ್ಲ. ಹೀಗಾಗಿ ತನಿಖಾ ತಂಡದ ವರದಿ ಬಗೆಗಿನ ಕುತೂಹಲ ಮತ್ತಷ್ಟೂಹೆಚ್ಚಿಸಿದೆ.

ವಿಮ್ಸ್ ಆಸ್ಪತ್ರೆ ರೋಗಿಗಳ ಸಾವಿನ ಪ್ರಕರಣ: ಸಚಿವ ಶ್ರೀರಾಮುಲು-ಸುಧಾಕರ್ ಜಟಾಪಟಿ

ಏನಿದು ಪ್ರಕರಣ ?

ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಇಬ್ಬರು ರೋಗಿಗಳು ಕಳೆದ ಸೆ.14 ರಂದು ಮೃತಪಟ್ಟಿದ್ದರು. ವಿದ್ಯುತ್‌ ಸಮಸ್ಯೆಯಿಂದ ವೆಂಟಿಲೇಟರ್‌ ನಾಲ್ಕೈದು ತಾಸುಗಳ ಕಾಲ ಕಾರ್ಯನಿರ್ವಹಿಸಿರಲಿಲ್ಲ. ಇದರಿಂದ ರೋಗಿಗಳು ಸಾವಿಗೀಡಾದರು ಎಂದು ಮೃತ ಕುಟುಂಬ ಸದಸ್ಯರು ಆರೋಪಿಸಿದ್ದರು.

ಘಟನೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ತನಿಖಾ ತಂಡ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಎಂಸಿ/ಆರ್‌ಐ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ನೇತೃತ್ವದಲ್ಲಿ 10 ಜನರಿದ್ದ ತನಿಖಾ ತಂಡವನ್ನು ರಚಿಸಲಾಯಿತು. ಸೆ.17 ರಂದು ಬಳ್ಳಾರಿಗೆ ಆಗಮಿಸಿದ ತನಿಖಾ ತಂಡ ವಿಮ್ಸ್‌ ಆಸ್ಪತ್ರೆಯಲ್ಲಿನ ವಿದ್ಯುತ್‌ ಪೂರೈಕೆ, ಸ್ಥಳೀಯ ಸೌಕರ್ಯಗಳು ಹಾಗೂ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿತಲ್ಲದೆ, ಈ ಸಂಬಂಧ ವಿಮ್ಸ್‌ ನಿರ್ದೇಶಕರು ಸೇರಿದಂತೆ ಘಟನೆ ನಡೆದ ದಿನದಂದು ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗಳನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿ,ಮಾಹಿತಿ ಸಂಗ್ರಹಿಸಿತು. ಎರಡು ದಿನ ಬಳ್ಳಾರಿಯಲ್ಲಿಯೇ ಇದ್ದ ತನಿಖಾ ತಂಡ ವಿಮ್ಸ್‌ ಘಟನೆಯ ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿತು. ಇದಾದ ಕೆಲ ದಿನಗಳ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಸಹ ಬಳ್ಳಾರಿ ವಿಮ್ಸ್‌ಗೆ ಆಗಮಿಸಿ, ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ವಿಮ್ಸ್‌ ಸಾವು ಪ್ರಕರಣ ಸಾರ್ವಜನಿಕರಲ್ಲಿ ಭೀತಿ ಮೂಡಿಸಿತ್ತು.

ಆಕಸ್ಮಿಕ ಘಟನೆ ಎಂದು ವರದಿ ಸಲ್ಲಿಕೆ?

ವಿಮ್ಸ್‌ ಸಾವು ಪ್ರಕರಣ ತನಿಖೆಯ ಕೌತುಕ ಮೂಡಿರುವ ಬೆನ್ನಲ್ಲೇ ಇದೊಂದು ಆಕಸ್ಮಿಕ ಘಟನೆ ಎಂದು ವರದಿ ಸಲ್ಲಿಕೆಯಾಗಿದೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ಲಭ್ಯವಾಗಿದೆ. ವಿಮ್ಸ್‌ ವೈದ್ಯಕೀಯ ಮೂಲಗಳ ಪ್ರಕಾರ ಬಳ್ಳಾರಿಗೆ ಆಗಮಿಸಿದ್ದ ತನಿಖಾ ತಂಡ ವಿಮ್ಸ್‌ನ ವಿದ್ಯುತ್‌ ಸಂಪರ್ಕ ಹಾಗೂ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಆದರೆ, ವಿದ್ಯುತ್‌ ವ್ಯತ್ಯಯದಿಂದಲೇ ವೆಂಟಿಲೇಟರ್‌ನಲ್ಲಿದ್ದ ಇಬ್ಬರು ರೋಗಿಗಳು ಸಾವನ್ನಪ್ಪಿಲ್ಲ. ಕಿಡ್ನಿ ವೈಫಲ್ಯ, ತೀವ್ರ ಉಸಿರಾಟ ತೊಂದರೆ, ಮೆದುಳಿನ ರಕ್ತಸ್ರಾವದಿಂದ ರೋಗಿಗಳು ವಿಮ್ಸ್‌ಗೆ ದಾಖಲಾಗಿದ್ದರು. ರೋಗ ಉಲ್ಬಣಗೊಂಡ ಬಳಿಕ ವಿಮ್ಸ್‌ಗೆ ಬಂದಿದ್ದರು. ಹೀಗಾಗಿಯೇ ಸಹಜವಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ವಿಮ್ಸ್‌ ರೋಗಿಗಳ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್:ನಿರ್ದೇಶಕರ ಮೇಲಿನ ಸಿಟ್ಟಿಗೆ ಕರೆಂಟ್ ಕಟ್!

ವಿಮ್ಸ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ವರದಿಯಲ್ಲೇನಿದೆ ? ಎಂಬುದು ನಮಗೂ ತಿಳಿದು ಬಂದಿಲ್ಲ.

-ಡಾ.ಗಂಗಾಧರಗೌಡ, ನಿರ್ದೇಶಕರು, ವಿಮ್ಸ್‌, ಬಳ್ಳಾರಿ

ವಿಮ್ಸ್‌ ಸಾವು ಪ್ರಕರಣದ ತನಿಖೆ ಕುರಿತು ವಿಮ್ಸ್‌ ನಿರ್ದೇಶಕರ ಜೊತೆ ಮಾತನಾಡಿದೆ. ವರದಿ ಸಲ್ಲಿಕೆಯಾಗಿದೆಯಂತೆ. ಆದರೆ, ವರದಿಯಲ್ಲೇನಿದೆ? ಎಂಬುದು ಗೊತ್ತಾಗಿಲ್ಲ. ಬೆಂಗಳೂರಿನಲ್ಲಿಯೇ ಪ್ರಕ್ರಿಯೆ ನಡೆಯುವುದರಿಂದ ನನ್ನ ಗಮನಕ್ಕೆ ಬಂದಿಲ್ಲ. ವರದಿಯನ್ನಾಧರಿಸಿ ಮೃತ ಕುಟುಂಬಗಳಿಗೆ ಪರಿಹಾರ ಬರುವಂತಿದ್ದರೆ ಕೂಡಲೇ ಗಮನ ಹರಿಸಿ ಎಂದು ವಿಮ್ಸ್‌ ನಿರ್ದೇಶಕರಿಗೆ ಸೂಚಿಸಿದ್ದೇನೆ.

-ಪವನಕುಮಾರ ಮಾಲಪಾಟಿ, ಜಿಲ್ಲಾಧಿಕಾರಿ, ಬಳ್ಳಾರಿ.

ವಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಸಾವನ್ನಪ್ಪಿದ ಪ್ರಕರಣದ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸತ್ಯಾಂಶ ಹೊರ ಹಾಕಬೇಕು. ವರದಿಯ ನಿಜಾಂಶ ಜನರ ಮುಂದಿಡಲು ಹಿಂದೇಟು ಹಾಕುತ್ತಿರುವುದೇಕೆ ?

ವಿ.ಬಿ.ಮಲ್ಲಪ್ಪ, ಜಿಲ್ಲಾಧ್ಯಕ್ಷ, ಆಮ್‌ಆದ್ಮಿ ಪಕ್ಷ, ಬಳ್ಳಾರಿ ಜಿಲ್ಲೆ.

Follow Us:
Download App:
  • android
  • ios