ಸಂಡೂರಿನ ಜೈಸಿಂಗಪುರ ಬಳಿ ಭಾನುವಾರ ಸಂಜೆ ಲಾರಿ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಳ್ಳಾರಿ (ಮೇ 26): ಸಂಡೂರಿನ ಜೈಸಿಂಗಪುರ ಬಳಿ ಭಾನುವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಈ ಅಪಘಾತವು ಸ್ಥಳೀಯರನ್ನು ಕಂಗಾಲಾಗಿಸಿದೆ.
ಅಪಘಾತದ ಹಿನ್ನಲೆ: ಲಕ್ಷ್ಮೀಪುರ ಗ್ರಾಮದ ಕುಟುಂಬದವರು ಹೊಸಪೇಟೆ ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರು ಜೈಸಿಂಗಪುರದ ಬಳಿ ಮೈನಿಂಗ್ ಟಿಪ್ಪರ್ ಅನ್ನು ಓವರ್‌ಟೇಕ್ ಮಾಡುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಸಾವಿಗೀಡಾದವರು:
ಆಶಾ (28)
ಜಯಲಕ್ಷ್ಮಿ (21)
ಸ್ವಾತಿ (5)
ಬಿಂದುಶ್ರೀ (4)
ಈ ಪೈಕಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಬಾಲಕಿಯರು ಇದ್ದಾರೆ. ಮೃತರ ಎಲ್ಲಾ ಮೂವರು ಲಕ್ಚ್ಮೀಪುರ ನಿವಾಸಿಗಳಾಗಿದ್ದಾರೆ. ಕಾರು ಚಲಾಯಿಸ್ತಿದ್ದ ರಮೇಶ ಹಾಗೂ ನಂದೀಶ್ (23) ಸ್ಥಿತಿ ಗಂಭೀರವಾಗಿದೆ. ಇವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಕಾರಿನಲ್ಲಿ ಇರುವ ಮಗು ಮಹಾಲಕ್ಷ್ಮಿ (3) ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ತಾಯಿಯನ್ನು ಅಪಘಾತದಲ್ಲಿ ಕಳೆದುಕೊಂಡ ಪುಟ್ಟ ಮಗು ಮೃತಪಟ್ಟಿರುವ ತಾಯಿಯ ನೆನಪಿಗೆ ಕಣ್ಣೀರು ಹಾಕುತ್ತಿರುವ ದೃಶ್ಯ ಎಲ್ಲರ ಮನಸ್ಸಿಗೆ ನೋವು ತಂದಿದೆ.
ಪೋಲೀಸರ ಕ್ರಮ: ಅಪಘಾತದ ಮಾಹಿತಿ ತಿಳಿದ ತಕ್ಷಣವೇ ಸಂಡೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಘಟನೆ ಸಂಬಂಧ ತನಿಖೆ ಪ್ರಾರಂಭಿಸಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗೆ ಮೃತದೇಹಗಳು ಬರ್ತಿದ್ದಂತೆ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರು ರಸ್ತೆಗಳ ಸುರಕ್ಷತೆ ಮತ್ತು ವೇಗ ನಿಯಂತ್ರಣದ ಅಗತ್ಯತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
