ಸುಳ್ಯ (ನ.03): ತೊಡಿಕಾನ ಸಮೀಪದ ದೇವರಗುಂಡಿ ಎಂಬಲ್ಲಿ ಬೆಂಗಳೂರಿನಿಂದ ಬಂದ ತಂಡವೊಂದು ಅಶ್ಲೀಲ ಭಂಗಿಗಳಲ್ಲಿ ಫೋಟೋಶೂಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ದೇವಳದಲ್ಲಿ ಖಂಡನಾ ನಿರ್ಣಯ ಸಭೆ ನಡೆಯಿತು.

ತೊಡಿಕಾನ ದೇವರಗುಂಡಿ ಫಾಲ್ಸ್‌ನಲ್ಲಿ ಅಶ್ಲೀಲ ಫೋಟೋಶೂಟ್‌ ಪ್ರಕರಣವನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಿ, ದೇವಸ್ಥಾನದ ಪ್ರಾವಿತ್ರ್ಯಕ್ಕೆ ಧಕ್ಕೆ ತರಲಾಗಿದೆ ಎಂದು ಭಜರಂಗದಳ, ವಿಶ್ವಹಿಂದೂ ಪರಿಷತ್‌ ಸಂಘಟನೆಗಳ ಪಧಾಧಿಕಾರಿಗಳು ತೊಡಿಕಾನ ದೇವಾಲಯಕ್ಕೆ, ಸುಳ್ಯ ಆರಕ್ಷಕ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇದರ ಬಗ್ಗೆ ತಹಸೀಲ್ದಾರ್‌ ದೇವರ ಭಕ್ತಾದಿಗಳ ವತಿಯಿಂದ ಸಭೆ ಕರೆದು, ನಿರ್ಣಯ ಕೈಗೊಂಡು ಅದರ ಪ್ರತಿಯನ್ನು ನಮಗೆ ಕಳುಹಿಸಿಕೊಡಿ, ಅದಕ್ಕೆ ಸೂಕ್ತವಾದ ಕಾನೂನುಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ ಮೇರೆಗೆ ದೇವಾಲಯದಲ್ಲಿ ಸಭೆ ನಡೆಯಿತು.

ಬಿಕಿನಿ ಪೋಟೋಶೂಟ್ ಮಾಡಿಸಿಕೊಂಡಿದ್ದ ಬೃಂದಾ ಅರಸ್ ಯಾರು? ...

ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ತಪ್ಪು ಮಾಡಿದವರು ದೇವಾಲಯದಲ್ಲಿ ಕ್ಷಮೆ ಯಾಚಿಸಿ ಪರಿಹಾರರ್ಥ ವಿಶೇಷ ಸೇವೆಯನ್ನು ಮಾಡುವುದೆಂದು ತೀರ್ಮಾನಿಸಲಾಯಿತು. ಮುಂದೆ ಇದರ ಭದ್ರತೆಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಕೊಳಲುಮೂಲೆ ವಹಿಸಿದ್ದರು. ಸಭೆಯಲ್ಲಿ ಘಟನೆಯನ್ನು ಮಾಜಿ ಅಧ್ಯಕ್ಷ ಕಿಶೋರ್‌ ಉಳುವಾರು ಪ್ರಸ್ತಾಪಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ದೇವಸ್ಥಾನದ ಮ್ಯಾನೇಜರ್‌ ಆನಂದ ಕಲ್ಲಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.