ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ತಮ್ಮ ಕಂಪನಿ ಹೆಸರಿಡುವಂತೆ ₹40 ಕೋಟಿ ಕೊಟ್ಟ ಬಾಗ್ಮನೆ ಟೆಕ್‌ಪಾರ್ಕ್!
ಬಾಗ್ಮನೆ ಟೆಕ್ ಪಾರ್ಕ್ 40 ಕೋಟಿ ರೂ. ಪಾವತಿಸಿ ಮುಂದಿನ 20 ವರ್ಷಗಳ ಕಾಲ ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣಕ್ಕೆ ತನ್ನ ಹೆಸರಿಡಲಿದೆ. ಸೀತಾರಾಮಪಾಳ್ಯ, ಬೆಳ್ಳಂದೂರು, ಮತ್ತು ಇಸ್ರೋ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಕ್ಕಾಗಿ ಪ್ರತಿ ನಿಲ್ದಾಣಕ್ಕೆ 10 ಕೋಟಿ ರೂ. ನೀಡಲಿದೆ.
ಬೆಂಗಳೂರು (ಡಿ.10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಮೆಟ್ರೋ ಮಾರ್ಗಗಳನ್ನು ನಿರ್ಮಾಣ ಮಾಡುತ್ತಾ ಇನ್ನೇನು 2025ಕ್ಕೆ ಹಲವು ಮೆಟ್ರೋ ಮಾರ್ಗದಲ್ಲಿ ಸಂಚಾರಕ್ಕೆ ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಡಲಿದೆ. ಇದೀಗ ಕೆಲವು ಐಟಿ ಕಂಪನಿಗಳು ತಮ್ಮ ಸಂಸ್ಥೆಯ ಮುಂಭಾಗದಲ್ಲಿ ಹಾದು ಹೋಗಿರುವ ಮೆಟ್ರೋ ಮಾರ್ಗದ ನಿಲ್ದಾಣಗಳಿಗೆ ತಮ್ಮ ಕಂಪನಿಗಳ ಹೆಸರಿಡುವಂತೆ ಕೋಟ್ಯಂತರ ರೂ. ಹಣವನ್ನು ಪಾವತಿಸಿವೆ. ಈ ಹಿನ್ನೆಲೆಯಲ್ಲಿ ಬಾಗ್ಮನೆ ಟೆಕ್‌ಪಾರ್ಕ್‌ನಿಂದಲೂ ಕೂಡ 40 ಕೋಟಿ ರೂ. ಹಣವನ್ನು ಬಿಎಂಆರ್‌ಸಿಎಲ್‌ಗೆ ಪಾವತಿಸಿ ಮುಂದಿನ 20 ವರ್ಷಗಳ ಕಾಲ ಬಾಗ್ಮನೆ ಟೆಕ್‌ಪಾರ್ಕ್ ಮೆಟ್ರೋ ನಿಲ್ದಾಣ ಎಂಬ ಹೆಸರನ್ನು ಪಡೆದುಕೊಂಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆಯು, 'ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಾಗೂ ಬಾಲ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಹಂತ-2ಎ ಯೋಜನೆಯ ಅಡಿಯಲ್ಲಿ ಕೇಂದ್ರ ಸಿಲ್ಕ್ ಬೋರ್ಡ್‌ಜಂಕ್ಷನ್- ಕೆ.ಆರ್ ಪುರ ಟರ್ಮಿನಲ್ ನ (ಒ.ಆರ್.ಆರ್ ಮಾರ್ಗ- ಉತ್ತರ-ದಕ್ಷಿಣ ಕಾರಿಡಾರ್) ನಡುವೆ ಬರುವ ಡಿ.ಆರ್.ಡಿ.ಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು) ಸಹಿ ಮಾಡಲಾಗಿದೆ. ಈ ಒಪ್ಪಂದದ ಪ್ರಕಾರ ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣಕ್ಕೆ ಬಾನ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ಪಡೆಯಲು 20 ವರ್ಷಗಳ ಅವಧಿಗೆ ರೂ.40 ಕೋಟಿ ನೀಡಲಿದೆ' ಎಂದು ತಿಳಿಸಿದೆ.
ಜೊತೆಗೆ, ಸೀತಾರಾಮಪಾಳ್ಯ, ಬೆಳ್ಳಂದೂರು, ಮತ್ತು ಇಸ್ರೋ ಮೆಟ್ರೋ ನಿಲ್ದಾಣಗಳಲ್ಲಿನ ಕಾನ್‌ಕೋರ್ಸ್ ಮಟ್ಟದಿಂದ ತಮ್ಮ ಕ್ಯಾಂಪಸ್‌ಗೆ ಸಂಪರ್ಕವನ್ನು ಒದಗಿಸಲು 30 ವರ್ಷಗಳ ಅವಧಿಗೆ ಪ್ರತಿನಿಲ್ದಾಣಕ್ಕೆ ರೂ. 10 ಕೋಟಿ ಬಿ.ಎಂ.ಆರ್.ಸಿ.ಎಲ್ ಗೆ ನೀಡಲಿದೆ. ಅದರಲ್ಲಿ ರೂ 10 ಕೋಟಿ ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ ಎಂದು ಮಾಹಿತಿ ನೀಡಿದೆ.
ಸದರಿ ಒಪಂದಗಳನ್ನು ಕರ್ನಾಟಕ ಸರ್ಕಾರದಿಂದ ಅನುಮೋದನೆ ಪಡೆದ ನಂತರ ನಿಲ್ದಾಣದ ನಾಮಕರಣ ಹಾಗೂ ಸಂಪರ್ಕವನ್ನು ಕಲ್ಪಿಸಲಾಗುವುದು. ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಬಿಎಂಆರ್‌ಸಿಎಲ್ ಮೆಟ್ರೋ ಯೋಜನೆಗೆ ನವೀನ ಹಣಕಾಸು ಕಾರ್ಯವಿಧಾನದ ಮೂಲಕ ಹಣಕಾಸು ಒದಗಿಸುತ್ತದೆ. ಈ ಹೊಸ ನೀಲಿ ಮಾರ್ಗವು 17.00 ಕಿ.ಮೀ (ಒ.ಆರ್.ಆರ್ ಮಾರ್ಗ) ಉದ್ದವಿದ್ದು 13 ನಿಲ್ದಾಣಗಳನ್ನು ಹೊಂದಿದೆ. ಇದು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು, ಐಟಿ ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಪ್ರಯಾಣಿಸಲು ಉತ್ತಮ ಮಾರ್ಗವಾಗಲಿದೆ. ಈ ಮೂಲಕ ಒ.ಆರ್.ಆರ್ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಈ ಬಾಗ್ಮನೆ ಟೆಕ್‌ಪಾರ್ಕ್ ಒಪ್ಪಂದವು ನೀಲಿ ಮಾರ್ಗದಲ್ಲಿ ಮಾಡಿಕೊಂಡ 3ನೇ ತಿಳುವಳಿಕೆಯ ಒಪ್ಪಂದವಾಗಿದೆ ಎಂದು ಎಂದು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.