ಜನತೆಗೆ ಉದ್ಯೋಗ ನೀಡಿ ವಲಸೆ ತಪ್ಪಿಸಿದ್ದೇನೆ: CEO ಗಂಗೂಬಾಯಿ ಮಾನಕರ

ಬಾಗಲಕೋಟೆ ಜಿಲ್ಲೆ ಬರ ಜಿಲ್ಲೆಯೆಂದು ಘೋಷಣೆ| ಜಿಲ್ಲೆಯ ಜನತೆಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡುವ ಮೂಲಕ ದೂರದ ಮಂಗಳೂರು, ಗೋವಾಗಳಿಗೆ ವಲಸೆ ಹೋಗುವದನ್ನು ತಪ್ಪಿಸಲಾಗಿದೆ| ಕಾಮಗಾರಿ ವೀಕ್ಷಿಸಿದ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ| 

Bagalkot Zilla Panchayat CEO Gangubai Manakar Talks Over Jobs Under the Employment Guarantee Scheme

ಬಾಗಲಕೋಟೆ(ಮಾ.05): ಜಿಲ್ಲೆಯಲ್ಲಿ 2020-21ನೇ ಸಾಲಿಗೆ 200 ಕೋಟಿ ವೆಚ್ಚದ ಉದ್ಯೋಗ ಖಾತರಿ ಕಾಮಗಾರಿಗಳ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

ತಾಲೂಕಿನ ಹಳದೂರ ಗ್ರಾಪಂ ವ್ಯಾಪ್ತಿಯ ಬೂದನಗಡದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆರೆ ಹೂಳು ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ 170 ಕೋಟಿ ರು.ಗಳ ವೆಚ್ಚದ ಕಾಮಗಾರಿಗಳ ಗುರಿ ಹೊಂದುವ ಮೂಲಕ ರಾಜ್ಯಕ್ಕೆ 5 ಸ್ಥಾನ ಪಡೆದುಕೊಂಡರೆ, 2020-21ನೇ ಸಾಲಿಗೆ 2 ಅಥವಾ 3ನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯನ್ನು ಬರ ಜಿಲ್ಲೆಯೆಂದು ಘೋಷಿಸಿದ್ದು, ಜಿಲ್ಲೆಯ ಜನತೆಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡುವ ಮೂಲಕ ದೂರದ ಮಂಗಳೂರು, ಗೋವಾಗಳಿಗೆ ವಲಸೆ ಹೋಗುವದನ್ನು ತಪ್ಪಿಸಲಾಗಿದೆ. ನರೇಗಾ ಯೋಜನೆಯ ವ್ಯಾಪ್ತಿಯಲ್ಲಿ ಸಿಬ್ಬಂದಿ ಹಾಗೂ ಡಾಟಾ ಎಂಟ್ರಿ ಆಪರೇಟರ್‌ ತೊಂದರೆ ಇದ್ದರೂ ಸಹ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಿಲ್ಲವೆಂದರು. 5 ಕಿ.ಮೀ ಅಂತರ ಮೀರಿ ಬರುವ ಕೂಲಿ ಕಾರ್ಮಿಕರಿಗೆ ಪ್ರಯಾಣ ಭತ್ಯೆಯನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭೇಟಿ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಉದ್ಯೋಗದ ಬೇಡಿಕೆ ಸಲ್ಲಿಸಿದ 15 ದಿನಗಳಲ್ಲೇ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡರು. ಕೂಲಿ ಹಣವನ್ನು ಸಕಾಲದಲ್ಲಿ ಜಮೆ ಆಗುತ್ತಿಲ್ಲವೆಂದು ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಮಾನಕರ ಅವರು ಕೂಲಿಕಾರ್ಮಿಕರ ಬ್ಯಾಂಕ್‌ ಖಾತೆ ಅಪ್‌ಡೆಟ್‌, ಆಧಾರ್‌ ನಂಬರ್‌ ಜೋಡಣೆ ಬಗ್ಗೆ ಗ್ರಾಮ ಪಂಚಾಯತನಲ್ಲಿ ಖಾತ್ರಿ ಪಡಿಸಲು ತಂಡ ರಚಿಸುವಂತೆ ಹಳದೂರ ಗ್ರಾ.ಪಂ ಅಭಿವೃದ್ಧಿ ಅಧಿ​ಕಾರಿ ಸಾವಿತ್ರಿ ಮಾಶಾಳ ಅವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಂದ ಜಿಪಂ ಸಿಇಒ ಗಂಗೂಬಾಯಿ ಮಾನಕರ ಸನ್ಮಾನ ಸ್ವೀಕರಿಸಿ ಅವರ ಜೊತೆ ಊಟ ಮಾಡಿದರು. 300 ಕ್ಕೂ ಹೆಚ್ಚು ಕಾರ್ಮಿಕರು ಇದ್ದರು. ಐಇಸಿ ಕಾರ್ಯಕ್ರಮ ಸಂಯೋಜಕ ನಾಗರಾಜ ರಾಜನಾಳ, ಎಂಐಎಸ್‌ನ ಉಜ್ವಲ ಸಕ್ರಿ, ಬಾದಾಮಿ ತಾಲೂಕಿನ ಐಇಸಿ ಸಂಯೋಜಕ ಸಮೀರ ಉಮರ್ಜಿ ಸೇರಿದಂತೆ ಇತರರು ಇದ್ದರು.
 

Latest Videos
Follow Us:
Download App:
  • android
  • ios