ದೇಶಕ್ಕಾಗಿ ವೇತನ ಕಟ್ ಮಾಡುವಂತೆ ಮೋದಿಗೆ ಪತ್ರ ಬರೆದ ರೈಲ್ವೇ ನೌಕರ!
ಬಾಗಲಕೋಟೆ ರೈಲ್ವೇ ನೌಕರನಿಂದ ಪ್ರಧಾನಿ ಮೋದಿಗೆ ಪತ್ರ| ದೇಶದ ಏಳಿಗೆಗಾಗಿ ವೇತನದ ಶೇ.5ರಷ್ಟು ಹಣ| ಸೇವಾವಧಿ ಮುಗಿದ ಬಳಿಕ ವೇತನದಲ್ಲಿ ಕಡಿತ ಮಾಡಲು ಅವಕಾಶಕ್ಕಾಗಿ ಮನವಿ| ಪ್ರಧಾನಿ ಮೋದಿಗೆ ಪತ್ರ ಬರೆದ ರೈಲ್ವೇ ನೌಕರ ಗುರುಪಾದಪ್ಪ ಪಾಟೀಲ್| ವಂದಾಲ ರೈಲು ನಿಲ್ದಾಣದಲ್ಲಿ ಪಾಯಿಂಟ್ಸ್‌ಮನ್ ಆಗಿರುವ ಗುರುಪಾದಪ್ಪ| ವೇತನದಲ್ಲಿ ಐದು ಕ್ಷೇತ್ರಗಳಿಗೆ ತಲಾ ಶೇ.1ರಷ್ಟು ಹಣ ಮೀಸಲು|
ಬಾಗಲಕೋಟೆ(ಜೂ.07): ಅದು 2014, ಭಾರತದ ನೂತನ ಪ್ರಧಾನಮಂತ್ರಿಯಾಗಿ ಆಧಿಕಾರ ಸ್ವೀಕರಿಸಿದ್ದ ನರೇಂದ್ರ ಮೋದಿ, ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣ ಮಾಡಿದ್ದರು. ‘ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪ್ರಾಣ ಅರ್ಪಿಸುವ ಅವಕಾಶ ನಮಗೆ ಸಿಗಲಿಲ್ಲ. ಆದರೆ ದೇಶಕ್ಕಾಗಿ ಜೀವಿಸುವ ಮೂಲಕ ನಾವು ಈ ಮಣ್ಣಿನ ಋಣ ತೀರಿಸೋಣ..’ ಎಂದು ಮೋದಿ ಮಾರ್ಮಿಕವಾಗಿ ಹೇಳಿದ್ದರು.
ಮೋದಿ ಅವರ ಮಾತು ಅದೆಷ್ಟು ನಿಜವಲ್ಲವೇ?. ದೇಶಕ್ಕಾಗಿ ಸಾಯುವುದಷ್ಟೇ ದೇಶಸೇವೆಯಲ್ಲ. ದೇಶಕ್ಕಾಗಿ ಜೀವಿಸಿ, ದೇಶಕ್ಕಾಗಿ ದುಡಿದು ಕೂಡ ದೇಶಸೇವೆ ಮಾಡಬಹುದು.
‘ಮಾನ್ಯ ಪ್ರಧಾನಿಗಳೇ , ಭಾರತದ ಏಳಿಗೆಗಾಗಿ ನಾನು ನನ್ನ ಕೈಲಾದಷ್ಟು ಸಹಾಯ ಮಾಡ ಬಯಸಿದ್ದು, ಪ್ರತಿ ತಿಂಗಳು ನನಗೆ ಬರುವ ವೇತನದಲ್ಲಿ ಶೇ.5ರಷ್ಟನ್ನು ಕಡಿತ ಮಾಡಲು ಅವಕಾಶ ನೀಡುವಂತೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ...’ ಇದು ಬಾಗಲಕೋಟೆ ರೈಲ್ವೇ ನೌಕರನೋರ್ವ ಪ್ರಧಾನಿ ಮೋದಿಗೆ ಬರೆದ ಪತ್ರದ ಸಾರಾಂಶ.
ಹೌದು, ಬಾಗಲಕೋಟೆಯ ರೈಲು ನಿಲ್ದಾಣದಲ್ಲಿ ಪಾಯಿಂಟ್ಸ್‌ಮನ್ ಆಗಿರುವ ಗುರುಪಾದಪ್ಪ ಪಾಟೀಲ್, ತಮ್ಮ ವೇತನದ ಶೇ.5ರಷ್ಟನ್ನು ದೇಶದ ಏಳಿಗೆಗಾಗಿ ಕಡಿತ ಮಾಡಿಕೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಶಿಕ್ಷಣ, ಕ್ರೀಡೆ,ರೈತ ಕಲ್ಯಾಣ, ಸೈನ್ಯ ಬಲ,ಅರಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ತಲಾ ಶೇ.1ರಷ್ಟು ವೇತನ ನೀಡುವುದಾಗಿ ಗುರುಪಾದಪ್ಪ ಪಾಟೀಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗುರುಪಾದಪ್ಪ, ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.