ಅರಸೀಕೆರೆ (ನ.25):  ಅಪೂರ್ವ ಔಷಧಿ ಸಸ್ಯಗಳ ಬೀಡು ತಾಲೂಕಿನ ಹಿರೇಕಲ್‌ ಬೆಟ್ಟದ ಅರಣ್ಯ ಭಾಗದ ಪ್ರಮುಖ ಭಾಗವಾಗಿರುವ ನಾಗಪುರಿ ಅರಣ್ಯದಲ್ಲಿ ಹಲವಾರು ರೋಗಗಳಿಗೆ ಬಳಸುವ ಔಷಧಿ ಸಸ್ಯಗಳಿವೆಯೆಂದು ಗುರುತಿಸಲಾಗಿದ್ದು, ಇಲ್ಲಿನ ಸಸ್ಯರಾಶಿಯನ್ನು ಉಳಿಸಿ ಬೆಳೆಸುವ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ.

ಆಯುರ್ವೇದ ಗಿಡಮೂಲಿಕೆಗಳ ಜನ್ಮಭೂಮಿಯೆಂದೇ ಖ್ಯಾತಿವೆತ್ತ ನಾಗಪುರಿ ಅರಣ್ಯ ಸಾಕಷ್ಟುಸಂಖ್ಯೆಯ ವನ್ಯಜೀವಿಗಳಿಗೂ ಆಶ್ರಯ ತಾಣವಾಗಿದ್ದು ಹಿರೇಕಲ್‌ ಗುಡ್ಡದ ಅರಣ್ಯ ವ್ಯಾಪ್ತಿ ಕಸಬಾ ಹೋಬಳಿಯ ಮಾಲೇಕಲ್‌ ತಿರುಪತಿ ಪರ್ವತ ಶ್ರೇಣಿಯಿಂದ ಆರಂಭವಾಗಿ ಅಗ್ಗುಂದ, ಸಿದ್ದರಹಳ್ಳಿ, ಶಂಕರನಹಳ್ಳಿ,ಬಾಣಾವರ ಹೋಬಳಿಯ ಪುರ್ಲೇಹಳ್ಳಿ, ಕಣಕಟ್ಟೆಹೋಬಳಿಯ ಜನ್ನಾವರ, ಹಿರೇಸಾದರಹಳ್ಳಿ ವ್ಯಾಪ್ತಿಯ ತನಕ ಸುಮಾರು 6136 ಎಕರೆ ವ್ಯಾಪ್ತಿಯಲ್ಲಿ ವಿಸ್ತಾರಗೊಂಡಿದೆ.

ಸಫಾರಿ ಹೋದವರಿಗೆ ವ್ಯಾಘ್ರನ ದರ್ಶನ : ಮರದ ಮೇಲೆ ಕುಳಿತ ಹುಲಿಯನ್ನ ನೋಡಿ ಫಿದಾ ...

ಹಿರೇಕಲ್‌ ಗುಡ್ಡದ ತಪ್ಪಲಿನ ಅರಣ್ಯದಲ್ಲಿ ನಾನಾ ಬಗೆಯ ಸಸ್ಯರಾಶಿ ಹೇರಳ ಪ್ರಮಾಣದಲ್ಲಿದ್ದು ಈ ಪೈಕಿ ಹೆಸರಿಸಬಹುದಾದವುಗಳೆಂದರೆ ದೇವದಾರಿ, ಬಿಕ್ಕೆ, ಗೇರು, ಬೇಲ, ಬಿಲ್ವಾರ, ಸೀಬೆ, ಕಂಚುವಾಲ, ಕಕ್ಕೆ, ಎಕ್ಕ,ಬೆಟ್ಟತಾರೆ, ದೇವಭೂತಾಳೆ, ತಂಗಳಿ, ಬಿಲ್ಲಾಳ, ಹೊಂಗೆ, ನಲ್ಲಿ ಆಲ, ಬಿಳಿ ಭೂತಾಳೆ, ಭಾಗೆ, ನವಿಲಾಡಿ, ಧಾರೆ, ಬೆಟ್ಟತಾವರೆ, ಬಸವನಪಡ, ದಿಂಡಿಗ, ಆಲಲೆ, ಸಾಗುವಾನಿ, ಥೂಪ್ರಾ, ಜಗಳಗಂಟಿ, ಕಳ್ಳಿ,ಬೇವು, ಕಡಿವೊಳೆ, ಹುಣಸೆ, ತುಗ್ಗಾಲಿ, ಏಲಕ್ಕಲಿ ಇನ್ನು ಮುಂತಾದ ಅಪೂರ್ವ ಔಷಧಿ ಸಸ್ಯಗಳ ತಾಣವಾಗಿದ್ದು ತಂಗಡಿ, ಶೂರಬ್‌, ಚುಜ್ಜಲು, ಹುಣಸೆಹಣ್ಣು, ಬೇವು, ಕಾರೆ, ಪಾಚಲಿ, ಬಿಕ್ಕೆ ಇನ್ನು ಬೆಟ್ಟದ ತುತ್ತತುದಿ ಭಾಗಗಳಲ್ಲಿ ಬೀಟೆ, ಹೊನ್ನೆ, ಬೆಟ್ಟದಾವರೆ, ಗೋರ್ವಿ, ದಿಂಡಗ, ನಲ್ಲಿ, ಬೆಳ್ಳಿಥಾರೆ, ನವಲಾಡಿ, ಹುಲ್ವೆ, ಮತ್ತಿ, ಹುರುಗಾಳು, ಮುರ್ಕಾಲು, ಜಲಾರಿ ಮತ್ತಿತರ ಮರಗಳು ಯಥೇಚ್ಛವಾಗಿವೆ.

ಈ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ, ತೇಗದ ಮರಗಳ ಪ್ರಮಾಣ ಕಡಿಮೆಯಿದ್ದರೂ ಇದೇ ಹೋಲಿಕೆಯಿರುವ ಮರಗಳು ಇಲ್ಲಿ ಸಾಕಷ್ಟಿವೆ. ಹಿರೇಕಲ್‌ ಗುಡ್ಡ ಅರಣ್ಯ ಪ್ರದೇಶದಲ್ಲಿ ಮುಖ್ಯ ಅರಣ್ಯ ಭಾಗವಾಗಿರುವ ನಾಗಪುರಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟುಮೈದಾನ ಪ್ರದೇಶವಿದ್ದು 450 ವರ್ಷಗಳ ಹಿಂದೆ ಜನರು ಇಲ್ಲಿ ವಾಸಿಸುತ್ತಿದ್ದರು. ನಾಗರೀಕತೆ ಇತ್ತೆಂಬುದಕ್ಕೆ ಈಗಲೂ ಕೆಲ ಪಳೆಯುಳಿಕೆಗಳು ಇಲ್ಲಿ ಕುರುಹುಗಳಾಗಿ ಲಭ್ಯವಾಗುತ್ತವೆ. ಇಲ್ಲಿ ವಾಸಿಸುತ್ತಿದ್ದ ಜನ ಕಾಲಕ್ರಮೇಣ ಅನೈಸರ್ಗಿಕವಾಗಿ ಮರಣ ಹೊಂದುವುದು ಹೆಚ್ಚಾದಾಗ ವಲಸೆ ಹೋದರು ಎಂದು ಹೇಳಲಾಗುತ್ತದೆ.

ನಾಗಪುರಿ ಅಭಯಾರಣ್ಯದಲ್ಲಿ ವನ್ಯಪ್ರಾಣಿಗಳ ಸಂಖ್ಯೆಯು ಬಾರಿ ಪ್ರಮಾಣದಲ್ಲಿದ್ದು ನೂರಕ್ಕೂ ಹೆಚ್ಚು ಚಿರತೆಗಳು, ಸಾವಿರಕ್ಕೂ ಹೆಚ್ಚ ಕರಡಿ, ತೋಳ, ನರಿ, ಕಡವೆಗಳು ಇಲ್ಲಿವೆ. ನವಿಲುಗಳು, ಜಿಂಕೆಗಳು, ಕಾಡುಹಂದಿಗಳು ಇಲ್ಲಿದ್ದು ಇವುಗಳನ್ನು ರಕ್ಷಿಸಲು ಹಿರಿಯ ಅಧಿಕಾರಿಗಳು ಮುಂದಾಗಿ ಸಿಬ್ಬಂದಿ ಕೊರತೆಯನ್ನು ಹೋಗಲಾಡಿಸಬೇಕೆಂಬುದು ಪ್ರಾಣಿಪ್ರಿಯರ ಒತ್ತಾಯವಾಗಿದೆ.

ಆದರೆ, ಈವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ.ಅರಣ್ಯ ಪ್ರದೇಶದಲ್ಲಿ ಆಹಾರವಿಲ್ಲದೆ ಕರಡಿ ಇನ್ನಿತರ ಪ್ರಾಣಿಗಳು ಗ್ರಾಮಗಳತ್ತ ಬರುತ್ತಿದ್ದು ಅವುಗಳ ಆಹಾರಕ್ಕಾಗಿ ಹಲಸು, ಹತ್ತಿ, ಗೋಣಿ ಸಸ್ಯಗಳನ್ನು ನೆಡಬೇಕೆಂಬ ಸಲಹೆ ವನ್ಯಪ್ರಿಯರಿಂದ ಈ ಹಿಂದಿನಿಂದ ಬರುತ್ತಿದ್ದರೂ ಸಹ ಹಿರಿಯ ಅಧಿಕಾರಿಗಳು ಗಮನ ಹರಿಸಿಲ್ಲ.

ಟಿಪ್ಪು ದರ್ಬಾರ್‌: ಮೈಸೂರು ಪ್ರಾಂತ್ಯವನ್ನಾಳುತ್ತಿದ್ದ ಟಿಪ್ಪು ಸುಲ್ತಾನ್‌ ನಿರ್ಮಿಸಿದ್ದ ಎನ್ನಲಾದ ಅಭೇದ್ಯ ಕೋಟೆ ಕಾಲಾಂತರದಲ್ಲಿ ಶಿಥಲಾವಸ್ಥೆಯ ಹಂತಕ್ಕೆ ತಲುಪಿ ಇಂದು ಅವಶೇಷಗಳಾಗಿ ಉಳಿದಿವೆ. ಶತೃಗಳನ್ನು ಹಿಮ್ಮೆಟ್ಟಿಸಲು ಬಳಸಲಾಗುತ್ತಿದ್ದ ದೊಡ್ಡ ಪಿರಂಗಿಗಳು ಶಂಕರೇಶ್ವರ ದೇವಾಲಯದ ಪರಿಸರದಲ್ಲಿವೆ. ನಾಗಪುರಿ ಅರಣ್ಯದಲ್ಲಿ ಜನರು ವಾಸವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಶಂಕರೇಶ್ವರ ದೇವಾಲಯ ಮತ್ತು ನೀರಿಗಾಗಿ ನಿರ್ಮಿಸಿದ್ದ ಕೆರೆಯನ್ನು ಇಂದಿಗೂ ಕಾಣಬಹುದು.

ಬ್ರಿಟಿಷ್‌ ಅಧಿಕಾರಿಗಳು ಮೋಜಿಗಾಗಿ ನಾಗಪುರಿ ಅರಣ್ಯವನ್ನು ವಿಹಾರ ತಾಣವನ್ನಾಗಿ ಮಾಡಿಕೊಂಡಿದ್ದು ವಾಸ್ತವ್ಯಕ್ಕಾಗಿ 100 ವರ್ಷಗಳ ಹಿಂದೆ ಕಟ್ಟಿಸಿದ್ದ ಭಂಗಲೆ ಇಂದು ಸಂಪೂರ್ಣ ಅವನತಿ ಆದಿಯಲ್ಲಿದೆ. ಹಿರೇಕಲ್‌ ಗುಡ್ಡದ ಅರಣ್ಯ ಪ್ರದೇಶದಲ್ಲಿ ಸಮರ್ಪಕ ಮಳೆ ಬಾರದಿರುವುದು ಕಾಡಿನ ಸಮೃದ್ಧ ಬೆಳವಣಿಗೆಗೆ ತೊಡಕಾಗಿದೆಯಾದರೂ ಬರುವ ಮಳೆ ಆಧಾರದಲ್ಲೇ ಕಾಡಿನ ಭಾಗ ಕಡಿಮೆಯಿಲ್ಲ ಎಂಬಂತೆ ಹುಲಸಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.

ಸಮೃದ್ಧ ಗಿಡಮರಗಳು ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಹಸಿರು ನೋಟ ಬೆಟ್ಟಗುಡ್ಡ ಪರಿಸರವನ್ನೇ ಹೊದ್ದುಮಲಗಿದಂತೆ ಕಾಣುವ ಹಿರೇಕಲ್‌ ಗುಡ್ಡದ ಅರಣ್ಯದ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಇದೇ ಪರಿಸರದಲ್ಲಿ ಮಾಲೇಕಲ್‌ ತಿರುಪತಿ ಬೆಟ್ಟದಲ್ಲಿ ಶ್ರೀನಿವಾಸ ಪದ್ಮಾವತಿ ದೇವಾಲಯ ಮುಂದುವರೆದಂತೆ ಕೆಂಗಲ್‌ ಸಿದ್ದೇಶ್ವರ ದೇವಾಲಯ,ಶಂಕರೇಶ್ವರ, ಬೆಟ್ಟದ ಸಿದ್ದೇಶ್ವರ ದೇವಾಲಯಗಳಿವೆ.

ಕಾಡಿನ ಪರಿಸರದಲ್ಲಿ ಮನುಷ್ಯ ಎಂಬ ಪ್ರಾಣಿಯ ಸಂಪರ್ಕ ಹೆಚ್ಚಾದಂತೆಲ್ಲ ಅರಣ್ಯ ನಾಶವು ಏರುಮುಖವಾಗಲು ಕಾರಣವಾಯಿತು ಎಂಬಂತೆ ಅರಣ್ಯವು ಇದೇ ಅಘಾತಕ್ಕೆ ಸಿಲುಕಿ ವೃದ್ಧಿಗಿಂತ ಕುಗ್ಗಿದ್ದೇ ಹೆಚ್ಚು. ಮೇವಿಗಾಗಿ ದನಗಾಹಿಗಳ ಆಕ್ರಮಣ, ಉರುವಲಿಗಾಗಿ ಕಾಡಿನ ಮರಗಳ ನಾಶ, ಬರಗಾಲ ಮಳೆಯ ಅಭಾವ ಇದೇ ಮುಂತಾದ ಕಾರಣಗಳು ಅರಣ್ಯ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ಅರಣ್ಯ ಪರಿಸರವನ್ನು ತಕ್ಕಮಟ್ಟಿಗೆ ಉಳಿಸಿಕೊಂಡು ಬರುವಲ್ಲಿ ಅರಣ್ಯ ಇಲಾಖೆ ಯಶಸ್ಸು ಸಾಧಿಸಿದೆ.

ನಾಗಪುರಿ ಅರಣ್ಯದ ಸಸ್ಯರಾಶಿಗಳ ನಡುವೆ ಇರುವ ಶಂಕರೇಶ್ವರ ದೇವಾಲಯ ಮತ್ತು ಕೂಗಳತೆ ದೂರದಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಾಲಯ ಕೇವಲ ಧಾರ್ಮಿಕ ತಾಣಗಳಲ್ಲ. ಪ್ರಕೃತಿ ಆರಾಧಕರಿಗೆ ಅದ್ಭುತ ಕ್ಷೇತ್ರಗಳು. ಅಲ್ಲದೇ ಆಯುರ್ವೇದ ಸಂಶೋಧಕರಿಗೆ ನೆಚ್ಚಿನ ತಾಣಗಳು, ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ದೊರೆಯದ ಗಿಡಮೂಲಿಕೆಗಳು ಸಾವಿರಾರು ವರ್ಷಗಳಿಂದ ಬದುಕುಳಿದಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಈ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದ್ದು, ಪಟ್ಟಣದಿಂದ ಸುಮಾರು 9 ಕಿ.ಮೀ.ದೂರದಲ್ಲಿರುವ ನಾಗಪುರಿ,ಶಂಕರೇಶ್ವರ,ಹಿರೇಕಲ್‌ ಸಿದ್ದೇಶ್ವರ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರ ಮನಸ್ಸಿಗೆ ಉಲ್ಲಾಸ ನೀಡುವ ತಾಣಗಳಾಗಿ ಮಾಡಬಹುದಾಗಿದ್ದು ಇದುವರೆಗೆ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸ್ಥಳಿಯರ ದೂರಾಗಿದೆ.

ಗಳಿಸಿದ್ದಕ್ಕಿಂತ ಕಳೆದಿದ್ದೇ ಹೆಚ್ಚು

ಕಳೆದ 50 ವರ್ಷಗಳಿಗೆ ಹೋಲಿಸಿದರೆ ಗಳಿಸಿದ್ದಕ್ಕಿಂತ ಕಳೆದಿದ್ದೇ ಹೆಚ್ಚು ಎಂಬುದು ಪರಿಸರ ಪ್ರೇಮಿಗಳ ಅನಿಸಿಕೆ ಅಪರೂಪದ ಭೂತಾಳೆ ಮರಗಳು ಈ ಅರಣ್ಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಇದ್ದವು. ಆದರೆ, ಧಾರ್ಮಿಕ ಕಟ್ಟಲೆಗಳು ಮತ್ತು ದೇವರ ಉತ್ಸವಗಳಿಗಾಗಿ ಅವುಗಳ ಮರಣ ಹೋಮ ಆರಂಭವಾದಾಗ ಇವುಗಳ ಸಂತತಿಗೆ ಕುತ್ತು ಬರುವಂತಹ ಸ್ಥಿತಿ ಇಲ್ಲಿದೆ. ಅರಣ್ಯಪ್ರೇಮ ಮತ್ತು ಕಾಳಜಿ ಇರುವ ಜನ ಹಾಗೂ ವಿದ್ಯಾರ್ಥಿಗಳು ಆಗಾಗ ಅರಣ್ಯದಲ್ಲಿ ಟ್ರಕ್ಕಿಂಗ್‌ ಮಾಡುವ ಮೂಲಕ ಅರಣ್ಯ ಪರಿಸರವನ್ನು ಬೆಳೆಸುವ ಉಳಿಸುವ ಕಾರ್ಯಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯ

ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲೂ ಇಲ್ಲದಂತಹ ಔಷಧ ಸಸ್ಯರಾಶಿಯೇ ನಾಗಪುರಿ ಅರಣ್ಯದ ಮಹತ್ವವನ್ನು ಹೆಚ್ಚಿಸಿದೆ ಎಂಬುದರಲ್ಲಿ ಉತ್ಪ್ರೇಕ್ಷೆಯೇನು ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಕಾಡಿನ ಬಗ್ಗೆ ಗಮನ ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಅಮೂಲ್ಯವಾದ ಮರಗಳು ಕಾಡುಗಳ್ಳರು ಕಡಿದು ಸಾಗಿಸುವಂತಹ ಕೃತ್ಯಗಳು ನಡೆಯುತ್ತಿವೆ. ಅರಣ್ಯ ಪ್ರದೇಶದಲ್ಲಿ ಕೋಟೆ ಕೊತ್ತಲುಗಳು ಅಪೂರ್ವ ನೈಸರ್ಗಿಕ ಬೆಟ್ಟಗಳು ದೇವಾಲಯಗಳಿರುವ ಕಾರಣದಿಂದ ನಿಧಿ ಆಸೆಗಾಗಿ ರಾತ್ರಿಯ ವೇಳೆ ನಾಗಪುರಿ ಅರಣ್ಯ ಬಳಿಯಿರುವ ಕೋಟೆ ಪ್ರದೇಶ ಮತ್ತು ಶಂಕರೇಶ್ವರ ದೇವಾಲಯಗಳಲ್ಲಿ ನೆಲ ಅಗೆಯುವ ಪ್ರಕ್ರಿಯೆಗಳು ಆಗಾಗ ನಡೆದಿವೆ. ಅಕ್ರಮವಾಗಿ ನಾಗಪುರಿ ಅರಣ್ಯದಿಂದ ಮರಳು ಸಾಗಿಸುವ ದಂಧೆಯು ನಡೆದಿದೆ. ರಾಜ್ಯ ಸರ್ಕಾರ ನಾಗಪುರಿ ಅರಣ್ಯವನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಕೈಗೆತ್ತಿಕೊಳ್ಳುವ ಮೂಲಕ ಕಾಯಕಲ್ಪ ನೀಡಬೇಕಾದ ಅವಶ್ಯಕತೆ ಇದೆ