ಕುದುರೆಗೂ ಕೊರೋನಾ ವೈರಸ್ ಕಾಟ: ಹಾರ್ಸ್‌ಗೂ ಮಾಸ್ಕ್!
ಕುದುರೆಗಳಿಗೆ ಮಾಸ್ಕ್ ಹಾಕಿ ಕೊರೋನಾ ಜಾಗೃತಿ| ನಮ್ಮ ಕರವೇಯಿಂದ ‘ಕೊರೋನಾ ತೊಲಗಿಸಿ ದೇಶ ಉಳಿಸಿ’ ಜಾಗೃತಿ ಕಾರ್ಯಕ್ರಮ| ವಿಜಯಪುರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮ|
ವಿಜಯಪುರ(ಮಾ.18): ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕುದುರೆಗಳಿಗೆ ಮಾಸ್ಕ್ ಹಾಕುವುದರ ಮೂಲಕ ‘ಕೊರೋನಾ ತೊಲಗಿಸಿ ದೇಶ ಉಳಿಸಿ’ ಎಂಬ ವಿಭಿನ್ನ ರೀತಿಯಲ್ಲಿ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳವಾರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ಕುದುರೆಗಳಿಗೆ ಮಾಸ್ಕ್ ತೊಡಿಸಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸಿದರು.
ಕೊರೋನಾ ಭೀತಿ: ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನಕ್ಕೆ ಬೀಗ!
ನಮ್ಮ ಕರವೇ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಮಾತನಾಡಿ, ದೇಶಾದ್ಯಂತ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅವರಲ್ಲಿ ಧೈರ್ಯ ತುಂಬುವ ಕೆಲಸ ಜಿಲ್ಲಾಡಳಿತ ಮಾಡಬೇಕಾಗಿದೆ. ಸರ್ಕಾರ ಆದೇಶ ನೀಡಿದಂತೆ 15 ದಿನದ ಮಟ್ಟಿಗೆ ಜಾತ್ರೆಗಳು, ಮದುವೆ ಸಮಾರಂಭ ನಡೆಯುವ ಹಾಗಿಲ್ಲ. ಶಾಲೆಗಳು ತೆರೆಯುವ ಹಾಗಿಲ್ಲ. ಹೀಗಿದ್ದೂ ಬಾರ್ ಮತ್ತು ದಾಬಾಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ದಾಬಾಗಳಲ್ಲಿ ಮತ್ತು ಬಾರ್‌ಗಳಲ್ಲಿ ಕೋಳಿ, ಕುರಿ, ಮೀನು ಮೊಟ್ಟೆಇವೆಲ್ಲವುಗಳಿಂದ ಆಹಾರ ತಯಾರಿಸುತ್ತಿದ್ದು ಅವುಗಳಿಂದ ಕೊರೋನಾ ಹರಡಲಾಗುವುದು ಎಂಬ ಆರೋಪ ಕೇಳಿ ಬರುತ್ತಿವೆ. ಆದ್ದರಿಂದ ದಾಬಾಗಳನ್ನೂ ಬಂದ್ ಮಾಡಿಸಿ ಜನರಿಗೆ ಕೊರೋನಾ ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಲ್ಲಿ ಮತ್ತಿಬ್ಬರಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ
ಮನೆ ಮನೆಗೆ ತೆರಳಿ ಕೊರೋನಾ ಕುರಿತು ಜಾಗೃತಿ ಮೂಡಿಸಲು ಡಿಎಚ್‌ಒ ಅವರು ಅಧಿಕಾರಿಗಳಿಗೆ ಸೂಚಿಸಬೇಕು. ಮಾರುಕಟ್ಟೆಯಲ್ಲಿ 10 ಮಾಸ್ಕನ್ನು 50ಕ್ಕೆ ಮಾರಲಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು. ಎಲ್ಲ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಕೊರೋನಾ ಕುರಿತು ಜಾಗೃತಿ ಮೂಡಿಸಲು ಮುಂದಾದರೆ ಕೊರೋನಾ ಹರಡವುದನ್ನು ತಡೆಯಬಹುದು ಎಂದರು.
ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರೀಫ, ಇರ್ಫಾನ ಶೇಖ, ಚಂದು ಜಾಧವ, ಲಾಲಸಾಬ ಸಾವರಗೋಳ, ಸಾಗರ ಬಾಗಲಕೋಟ, ಪರಶುರಾಮ ಬಿಜಾಪುರ, ಶ್ರೀಶೈಲ ಕುಮಸಗಿ, ಯಮನಪ್ಪ ಬೂದಿಹಾಳ, ಅಶೋಕ ಹಾದಿಮನಿ, ಆನಂದ ಕಟ್ಟಿಮನಿ, ರೇಖಾ ಬಮ್ಮನಳ್ಳಿ, ರವಿ ರಾಠೋಡ, ಈಶ್ವರ ಉಮರಾಣಿ, ಗಣೇಶ ರಾಠೋಡ, ಡಾ. ಗುರಿಕಾರ, ಬಾಬುಲಾಲ ಗೌಂಡಿ, ಅಕ್ಷಯ ವಿಜಯಪುರ, ಅನೀಲ ರಡ್ಡಿ ಸೇರಿ ಅನೇಕರಿದ್ದರು.