Tumakur : ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಿ
ಸೇವೆ ಕಾಯಂ, ಪೋ›ತ್ಸಾಹಧನ ಹೆಚ್ಚಳ, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ತುಮಕೂರು (ನ.19):ಸೇವೆ ಕಾಯಂ, ಪೋ›ತ್ಸಾಹಧನ ಹೆಚ್ಚಳ, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಪಿಎಚ್‌ಸಿ ಉಪಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಆಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಪ್ರವೇಶ ಪರೀಕ್ಷೆ ಬರೆದು ಗೌರವಧನದ ಆಧಾರದಲ್ಲಿ ನೇಮಕಗೊಂಡಿರುವ ಬಿ.ಎಸ್.ಸಿ ನರ್ಸಿಂಗ್,ಎಂ.ಎಸ್ಸಿ ನರ್ಸಿಂಗ್ ಓದಿರುವ ಸುಮಾರು 394 ಜನರು ಸಮುದಾಯ ಆರೋಗ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದು, ಮೇಲಾಧಿಕಾರಿಗಳಿಂದ ಸಾಕಷ್ಟುಕಿರುಕುಳ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸಮುದಾಯ ಆರೋಗ್ಯಾಧಿಕಾರಿಗಳ ಬೇಡಿಕೆ ಕುರಿತಂತೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್,ಸಮುದಾಯ ಆರೋಗ್ಯಾಧಿಕಾರಿಗಳ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ಅವರಿಗೆ ಮುಂಬಡ್ತಿಗೆ ಅವಕಾಶ ನೀಡಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನೇಮಕವಾಗಿರುವ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಬೇರೆ ರಾಜ್ಯಗಳಲ್ಲಿ 15 ಸಾವಿರ ರು. ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ 8000 ಸಾವಿರ ರು.ಗಳನ್ನು ನೀಡಲಾಗುತ್ತಿದೆ. ಹಾಗಾಗಿ ಬೇರೆ ರಾಜ್ಯಗಳ ರೀತಿ ನಮಗೂ ಪೋ›ತ್ಸಾಹ ಧನ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಆರೋಗ್ಯ ಉಪಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಷಿಕ ಮುಕ್ತ ನಿಧಿಯಲ್ಲಿ 50 ಸಾವಿರ ರು. ಗಳನ್ನು ನೀಡಬೇಕು ಹಾಗೂ ಅದನ್ನು ನೇರವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ. ಸಮುದಾಯ ಆರೋಗ್ಯಾಧಿಕಾರಿಗಳು ಒದಗಿಸಬೇಕಿರುವ ಸಮಗ್ರ 15 ಆರೋಗ್ಯ ಸೇವೆಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಮುದಾಯದ ಆರೋಗ್ಯ ಅಧಿಕಾರಿಗಳನ್ನು ಮುಕ್ತ ಅವಕಾಶ ಕಲ್ಪಿಸಬೇಕು. ನಮ್ಮನ್ನು ಅನ್ಯ ಕೆಲಸಗಳಿಗೆ ನಿಯೋಜಿಸುವುದರಿಂದ ಆರೋಗ್ಯ ಸೇವೆಗಳಲ್ಲಿ ಏರುಪೇರಾಗುತ್ತಿದೆ. ಇದು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಯ ಮೇಲೂ ಕೆಟ್ಟಪರಿಣಾಮ ಬೀರಲಿದೆ ಎಂದು ಶ್ರೀನಿವಾಸ್ ತಿಳಿಸಿದರು.
ಸಂಘದ ಮಹಿಳಾ ನಿರ್ದೇಶಕಿ ಶಿಲ್ಪ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ನೇಮಕಗೊಂಡಿರುವ ನಾವುಗಳು, ಕಾಯಂ ನೌಕರರಾಗಿರುವ ಎಎನ್‌ಎಂ ಗಳ ಕೈಯಲ್ಲಿಯೂ ಅವಾಚ್ಯ ಮಾತುಗಳನ್ನು ಕೇಳಬೇಕಾಗಿದೆ. ಏನಾದರೂ ಸಲಹೆ ನೀಡಿದರೆ ನೀವು ಕಾಯಂ ನೌಕರರಲ್ಲ ಎಂದು ಕೀಳಾಗಿ ನೋಡುತ್ತಾರೆ. ಮೊದಲು ಇದು ನಿಲ್ಲಬೇಕು. ಇಲ್ಲದಿದ್ದರೆ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯವಿಲ್ಲ. ಪೀಠೋಪಕರಣಗಳನ್ನು ನಮ್ಮ ಸ್ವಂತ ಹಣದಲ್ಲಿಯೇ ಕೊಂಡು ಸೇವೆ ಒದಗಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಅಲ್ಲದೆ ಅಂತರ ಜಿಲ್ಲಾ ವರ್ಗಾವಣೆಗೂ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್ ವಾರದ, ಪದಾಧಿಕಾರಿಗಳಾದ ಚನ್ನಲಿಂಗೇಶ್‌ಮೂರ್ತಿ, ರೋಹಿತ್‌ರಾಜ್, ನಾಗೇಂದ್ರ, ಕುಮಾರ್, ಶಾಂತಕುಮಾರ್ ಸೇರಿದಂತೆ ಜಿಲ್ಲೆಯ 394 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.
ಆರೋಗ್ಯ ಕೇಂದ್ರದಲ್ಲಿ ಮೂಲ ಸೌಕರ‍್ಯ ನೀಗಿಸಿ
ಸಮುದಾಯ ಆರೋಗ್ಯ ಆಧಿಕಾರಿಗಳು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆಯಿದೆ. ಕೆಲವು ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಕುರ್ಚಿಯೂ ಇಲ್ಲದ ಪರಿಸ್ಥಿತಿ ಇದೆ. ಹಾಗಾಗಿ ಎಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಸರಿಯಾದ ಔಷಧಿಗಳ ವಿತರಣೆಯಾಗುತ್ತಿಲ್ಲ. ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ಸಣ್ಣಪುಟ್ಟವಿಚಾರಗಳಿಗೂ ನೊಟೀಸ್ ನೀಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ನಡೆದಿದೆ. ಇದು ನಮ್ಮ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಾವು ಕೆಲಸ ಮಾಡುವುದೇ ಕಷ್ಟವಾಗಲಿದೆ. ಹಾಗಾಗಿ ಕಿರುಕುಳ ನಿಲ್ಲಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.