ಬೆಂಗಳೂರು(ಅ.21): ಸಾರಿಗೆ ಇಲಾಖೆಯು ಬೆಂಗಳೂರಿನ ಕೋರಮಂಗಲ ಆರ್‌ಟಿಓ ಕಚೇರಿಯಲ್ಲಿ ಲಘು ಮೋಟಾರು ವಾಹನಗಳಿಗಾಗಿ ಪ್ರಾರಂಭಿಸಿರುವ 'ಕೆಎ-01-ಎಂವಿ’ ಮುಂಗಡ ಶ್ರೇಣಿಯ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜಿನಲ್ಲಿ ‘0001’ ಸಂಖ್ಯೆಯು ಬರೋಬ್ಬರಿ 10.75 ಲಕ್ಷ ರು. ಹರಾಜಾಗಿದೆ!. ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೋಂದಣಿ ಸಂಖ್ಯೆಯೊಂದು ಇಷ್ಟು ದುಬಾರಿ ಮೊತ್ತಕ್ಕೆ ಹರಾಜುಗೊಂಡಿದೆ.

ಬೆಂಗಳೂರಿನ ಗುಮಾಲ್‌ ಮಸ್ತಾಪ ಎಂಬುವರು ತಮ್ಮ ನೂತನ ಬೆಂಜ್‌ ಕಾರಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆ ಅಳವಡಿಸುವ ಉದ್ದೇಶದಿಂದ ಹರಾಜಿನಲ್ಲಿ ಪಾಲ್ಗೊಂಡು ದುಬಾರಿ ಮೊತ್ತಕ್ಕೆ ಬಿಡ್‌ ಸಲ್ಲಿಸಿ ತಮ್ಮ ನೆಚ್ಚಿನ ಸಂಖ್ಯೆ 0001 ಪಡೆದುಕೊಂಡಿದ್ದಾರೆ. ಸಾರಿಗೆ ಇಲಾಖೆ 50 ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜಿಗೆ ಇರಿಸಿತ್ತು. ಈ ಪೈಕಿ 15 ಸಂಖ್ಯೆಗಳು ಮಾರಾಟವಾಗಿದ್ದು, ಇಲಾಖೆಗೆ 29.55 ಲಕ್ಷ ರು. ಆದಾಯ ಬಂದಿದೆ ಎಂದು ಅಪರ ಸಾರಿಗೆ ಆಯುಕ್ತ ಎಲ್‌.ನರೇಂದ್ರ ಹೋಳ್ಕರ್‌ ತಿಳಿಸಿದ್ದಾರೆ.

ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

ಯಾವುದಕ್ಕೆ ಎಷ್ಟು?:

- 0001 ಸಂಖ್ಯೆಗೆ ಅತಿ ಹೆಚ್ಚು ಮೊತ್ತ 10.75 ಲಕ್ಷ ರು.
- ಕೆಎ-01-ಎಂವಿ-9999 ಸಂಖ್ಯೆ 4.15 ಲಕ್ಷ ರು.
- ಕೆಎ-01-ಎಂವಿ-0009 ಸಂಖ್ಯೆ 3.75 ಲಕ್ಷ ರು.
- ಕೆಎ-01-ಎಂವಿ-0999 ಸಂಖ್ಯೆ 2.05 ಲಕ್ಷ ರು.
- ಕೆಎ-01-ಎಂವಿ-0555 ಸಂಖ್ಯೆ 1.16 ಲಕ್ಷ ರು.
- 0011 ಸಂಖ್ಯೆ 85 ಸಾವಿರ ರುಪಾಯಿ
- 0005, 5555, 1989, 1111, 3333, 0003, 1459, 0777, 0099ಗೆ ತಲಾ 76 ಸಾವಿರ ರು.