ಕೊರೋನಾ ಸೋಂಕು: ಮೃತ ವೃದ್ಧ ವಾಸವಿದ್ದ ಸ್ಥಳದಲ್ಲಿ ಆತಂಕದ ವಾತಾವರಣ!

ಕೊರೋನಾ ಸೋಂಕಿನ ಆತಂಕ| ಕಲಬುರಗಿ ನಗರದ ವಾರ್ಡ್ 30 ರ ಮೋಮಿನಪುರಾದಲ್ಲಿ ಕನ್ನಡಪ್ರಭ ರಿಯಾಲಿಟಿ ಚೆಕ್| ಇಲ್ಲೆಲ್ಲೂ ಕಾಣ್ತಿಲ್ಲ ಸೋಂಕಿನಿಂದ ಪಾರಾಗುವ ಮಾಹಿತಿ | ಬಿಕೋ ಎನ್ನುತ್ತಿದೆ ಕೊರೋನಾದಿಂದ ಮೃತಪಟ್ಟ ವೃದ್ಧ ವಾಸವಿದ್ದ ಮೋಮಿನಪುರ| 

Atmosphere of Anxiety in Kalaburagi Due to Coronavirus

ಶೇಷಮೂರ್ತಿ ಅವಧಾನಿ/ ರಾಮಲಿಂಗ ರಾಠೋಡ 

ಕಲಬುರಗಿ(ಮಾ.14): ಕೊರೋನಾ ಸೋಂಕಿತ ಸಾವನ್ನಪ್ಪಿದ್ದಾನಲ್ಲ, ಆತನ ಮನೆ ಹುಡುಕಿ ಯಾರಾದರೂ ಮೋಮಿನಪುರ ಪ್ರವೇಶಿಸಿದರೆ ಸಾಕು, ಅಲ್ಲಿನ ನಿವಾಸಿಗಳು ದೂರದಿಂದಲೇ ಮನೆ ತೋರಿಸಿ ಮಾಯವಾಗುತ್ತಿದ್ದಾರೆ. ವೈರಾಣು ಸೋಂಕಿನ ಭಯ ಅವರಲ್ಲಿ ಮನೆ ಮಾಡಿದ್ದೇ ಇದಕ್ಕೆ ಕಾರಣ. 

'ಕೊರೋನಾ ಸೆ ಮರ್ ಗಯಾ ನಾ ಉನ್ಕಾ ಘರ್ ಕ್ಯಾ? ಇಸಿ ರಸ್ತೆ ಸೆ ಜಾ....’ ಎಂದು ಹೇಳುತ್ತ ಜನ ಕೈ ತೊಳೆದುಕೊಳ್ಳುತ್ತಿದ್ದಾರೆ. ಎಂಎಸ್‌ಕೆ ಮಿಲ್ ಮೋಮಿನ್‌ಪುರಾ ಬಡಾವಣೆಯಲ್ಲಿ ಜನ ಸಂಚಾರ ರಸ್ತೆಯಲ್ಲಿ ವಿರಳವಾಗಿದೆ. ಮೋಮಿನಪುರಾ ಮನೆಮನೆಯಲ್ಲೂ ಕೊರೋನಾ ವೈರಸ್ ಭೀತಿ ಮನೆ ಮಾಡಿದೆ ಎಂಬುವುದು ಅವರ ಮಾತಿನಲ್ಲೇ ವ್ಯಕ್ತವಾಗುತ್ತಿದೆ. ಆದರೂ ಅವರು ಯಾರು ಅದನ್ನು ತೋರಗೊಡುತ್ತಿಲ್ಲ. ತಾವೇನು ಮಾಡಬೇಕು ಎಂಬುದು ಅಲ್ಲಿದ್ದರಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲ. 

ಕಲಬುರಗಿ: ಕೊರೋನಾ ಚಿಕಿತ್ಸೆಗೆ ESIC ಆಸ್ಪತ್ರೆ ಸಕಲ ಸಿದ್ಧ

ಈ ಸಂಗತಿ ತಿಳಿ ಹೇಳುವ ಕೆಲಸಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಲ್ಲಿ ಬಿಡಾರ ಹೂಡಿ ಜಾಗೃತಿ ಮೂಡಿಸುವ, ಧ್ವನಿ ವರ್ಧಕ ಸಂದೇಶ ರವಾನಿಸುವ ಕೆಲಸಕ್ಕೆ ಚಾಲನೆ ನೀಡಿದಂತೆ ಕಂಡು ಬರಲೇ ಇಲ್ಲ. ‘ಕನ್ನಡಪ್ರಭ’ ಇಡೀ ಬಡಾವಣೆ ೨ ಗಂಟೆ ಸುತ್ತಾಡಿದರೂ ಕೊರೋನಾ ಮಾಹಿತಿ ಸಾರುವ ಯಾವ ಯತ್ನಗಳು ಅಲ್ಲಿ ಕೈಗೊಂಡಿದ್ದು ಕಾಣಲಿಲ್ಲ. 

ಮೋಮಿನಪುರಾ ದಟ್ಟ ಜನವಸತಿ ಬಡಾವಣೆ. ವಾರ್ಡ್ 30 ಇಲ್ಲಿನ ರಸ್ತೆಗಳಲ್ಲಿ ಸದಾ ಜನಜಂಗುಳಿ ಇರುತ್ತಿತ್ತು. ಕಳೆದ ಮೂರು ದಿನಗಳ ಹಿಂದೆ ಕಾಣುತ್ತಿದ್ದ ಜನಜಂಗುಳಿ ಈಗ ಮಂಗಮಾಯವಾಗಿದ್ದೇ ಅಚ್ಚರಿ. ಇದಕ್ಕೆಲ್ಲ ಕೊರೋನಾ ಭಯವೇ ಕಾರಣ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಅದರಲ್ಲೂ ಕೊರೋನಾ ಸೋಂಕಿತರಾಗಿ ಸಾವನ್ನಪ್ಪಿರುವ ವೃದ್ಧರ ಮನೆ ಅಕ್ಕಪಕ್ಕದಲ್ಲೂ ಜನ ಸುಳಿಯದಂತಾಗಿದೆ. 

ಫಟಾಫಟ್ ರಥೋತ್ಸವ: 'ಕೊರೋನಾದಿಂದ ಕಲಬುರಗಿ ಕಾಪಾಡಪ್ಪ ಶರಣ ಬಸವ'

ಕೊರೋನಾ ವೈರಸ್‌ದಿಂದ ಮೃತಪಟ್ಟಿದ್ದಾರೆಂದು ದೃಢಪಡುತ್ತಿದ್ದಂತೆ ಆ ಮಾರ್ಗದಲ್ಲಿ ಯಾರೂ ಸುಳಿಯುತ್ತಿಲ್ಲ. ಮನೆ ಮಾರ್ಗವಾಗಿ ಹೋಗುವವರೆಲ್ಲ ದೂರದಿಂದ ಸುತ್ತಾಡಿ ಬರುತ್ತಿದ್ದಾರೆ. ಪಾದಚಾರಿಗಳಷ್ಟೇ ಅಲ್ಲ, ವಾಹನ ಸವಾರರೂ ಸಹ ಆ ಕಡೆ ಸುಳಿಯುತ್ತಿಲ್ಲ. ಹೋಟೆಲ್‌ಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ಕೊರೋನಾ ಸೋಂಕು, ಸಾವಿನದ್ದೇ ಮಾತು. ಯೇ ಕ್ಯಾ ಬಿಮಾರಿ ಹೈ ಭಾಯ್, ಇತನಾ ಪರೇಶಾನ್ ಕಿಯಾ ಹೈ... ಎಂದು ಮೋಮಿನಪುರಾ ನಿವಾಸಿಗಳು ಆಡಿಕೊಳ್ಳುತ್ತ ಕಂಗಾಲಾಗಿದ್ದಾರೆ. ಇದು ಯಾವ ತರಹ ರೋಗಾನೋ ಗೊತ್ತಾಗುತ್ತಿಲ್ಲ ಎಂದು ಕೊರೋನಾ ವೈರಾಣುವಿಗೇ ಹಿಡಿಶಾಪ ಹಾಕುತ್ತಿದ್ದಾರೆ. 

ಕೊರೋನಾ ಸೇ ಡರನಾ.... ಮರನಾ ಕ್ಯಾ?: 

ಕೊರೋನಾ ವೈರಾಣುವಿಗೆ ಈ ಪರಿ ತಾಕತ್ತಿದೆಯೆ? ಇದು ಬಂದಲ್ಲಿ ಸಾವೇ ಗತಿಯೆ? ಇದರಿಂದ ಬಚಾವ್ ಆಗಲು ದಾರಿಗಳೇ ಇಲ್ಲವೆ? ದಾರಿಗಳಿದ್ದರೆ ಹೇಳಬೇಕಲ್ಲವೆ? ಇಲ್ಲಿ ನಮ್ಮ ಓಣ್ಯಾಗ ಇಂತಹ ದಾರಿಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲವಲ್ರಿ ಎಂದು ಬಡಾವಣೆ ನಿವಾಸಿಗಳು ‘ಕನ್ನಡಪ್ರಭ’ಕ್ಕೆ ತಮ್ಮ ಮನದಾಳದ ಆತಂಕ ವಿವರಿಸಿದ್ದಾರೆ. 

ಕೊರೋನಾ ಕಾಡಿರುವ ಬಡಾವಣೆಯಲ್ಲಿ ಇರುವ ಜನ ಏನೆಲ್ಲ ಮುಂಜಾಗ್ರತೆ ವಹಿಸಬೇಕು. ಏನೆಲ್ಲ ಮಾಡಬೇಕು? ಮಾಡಬಾರದು ಎಂಬ ಬಗ್ಗೆ ಮುನ್ನೆ ಚ್ಚರಿಕೆ, ಮಾಹಿತಿ ರವಾನೆ ಕೆಲಸಗಳು ಅಲ್ಲಿ ಯಾರೂ ಶ್ರದ್ಧೆಯಿಂದ ಕೈಗೆತ್ತಿಕೊಂಡು ಮಾಡುತ್ತಿರುವುದು ಸಾವು ಸಂಭವಿಸಿ ದಿನ 3 ಉರುಳಿದರೂ ಕಂಡು ಬರಲಿಲ್ಲ. ಇತ್ತ ನೋಡಿದರೆ ಜಿಲ್ಲಾಡಳಿತ ಮೋಮಿನ ಪುರಾ ಬಗ್ಗೆ ಮಾತನಾಡುತ್ತ ಇಲಾಖೆ ಅಧಿಕಾರಿಗಳಿದ್ದಾರೆ, ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದೇ ಬಂತೇ ಹೊರತು ವಾಸ್ತವದಲ್ಲಿ ಯಾರೂ ಜಾಗೃತಿ ಸಂದೇಶ ನೀಡುವವರು ಕಾಣಲೇ ಇಲ್ಲ. ಕೆಲವರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ ಉಳಿದವರಿಗೆ ಕೈ ತೊಳೆಯುವ, ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ಇರಲಿಲ್ಲ ಎಂಬುದು ಅವರನ್ನು ಮಾತಿಗೆ ಎಳೆದಾಗ ಗೊತ್ತಾಯ್ತು. ಹಮ್ ಕೋ ಕುಛ್ ಭೀ ಮಾಲೂಮ್ ನಹೀಂ, ಹಮ್ ಕ್ಯಾ ಪಢೇ ಹೈ ಕ್ಯಾ? ಟೀವಿ ದೇಖತೆ ಹೈ... ಕಾಮ್ ಕೆ ಬಿನಾ ಕುಚ್ ಬಿ ಮಾಲೂಮ್ ನಹೀಂ, ಹಮಾರಾ ಗಲ್ಲಿ ಮೇ ಕುಛ್ ತೋ ಗಡಬಡ್ ಹುವಾ ... ಓ ಮಾಲೂಮ್ ಹೈ, ಕ್ಯಾ ಹೂವಾ... ಕಿಸ್ ವಜಯ್ ಸೆ ಹುವಾ... ಮಾಲೂಮ್ ನಹೀಂ... ಎಂದು ಅಲ್ಲಿನ ದಿನಗೂಲಿ ಅನೇಕ ಕೆಲಸಗಾರರು, ಕುಶಲ ಕರ್ಮಿ ಯುವಕರು ‘ಕನ್ನಡಪ್ರಭ’ ಜೊತೆ ಮಾತನಾಡುತ್ತ ತಮ್ಮ ಅನಿಸಿಕೆ ಹಂಚಿಕೊಂಡರು. 

ಕೋರೋನಾ ವೈರಸ್‌ನಿಂದಾಗಿ ಎಲ್ಲರೂ ಸಾಯುತ್ತಾರೆಯೇ? ಹಿಂಗಾದರೆ ಏನು ಮಾಡ್ಬೇಕು? ಎಂಬ ಮೂಲ ಸಂಗತಿ ಅಲ್ಲಿನ ಜನತೆಗೆ ಗೊತ್ತಿಲ್ಲದ್ದು ಜಾಗೃತಿ ಕೊರತೆಗೆ ಕನ್ನಡಿ ಹಿಡಿದಿತ್ತು. ಕೊರೋನಾ ಸೋಂಕಿನಿಂದ ಬಚಾವ್ ಆಗಲು ಸರಳ ವಿಧಾನಗಳೇನು? ಮಾಸ್ಕ್ ಧರಿಸುವುದು, ಕೈ ತೊಳೆದುಕೊಳ್ಳುವುದು ಸೇರಿದಂತೆ ಮುಂಜಾಗ್ರತ ಕ್ರಮಗಳ್ಯಾವುವು, ಕೆಮ್ಮು, ನಂಗಡಿ, ಜ್ವರ ಬಂದರೆ ಏನ್ಮಾಡಬೇಕೆಂಬ ಮಾಹಿತಿ ಅಲ್ಲಿ ಬರ ಕಾಡಿತ್ತು. ಮಾಹಿತಿ ಕೊರತೆಯಿಂದಾಗಿಯೇ ಮೋಮಿನಪುರಾ ನಿವಾಸಿಗಳು ವಯೋವೃದ್ಧ ಸಾವನ್ನಪ್ಪಿದ ಮನೆ ಹೊರತು ಪಡಿಸಿ ಇನ್ನೆಲ್ಲ ರಸ್ತೆಗಳಲ್ಲೂ ಯಾವುದೇ ಕಿಂಚಿತ್ ಮುಂಜಾಗ್ರತೆ ಕ್ರಮಗಲಿಲ್ಲದಂತೆ ಅಡ್ಡಾಡುತ್ತಲೇ ಇದ್ದರು. ಮಕ್ಕಳು, ವಯೋವೃದ್ಧರು ಮನೆಯ ಹೊರಗಡೆ ಹೆಚ್ಚಾಗಿ ಕಂಡರು. ಕೊರೋನಾ ಭೀತಿ ಇದೇ ವರ್ಗಕ್ಕೆ ಹೆಚ್ಚು ಇರುವಾಗಲೂ ಇವರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಅನೇಕರು ಆಡಿಕೊಳ್ಳುತ್ತಿದ್ದರು.

ಕೊರೋನಾ ಸೋಂಕಿನಿಂದ ಸಾವಿಗೀಡಾದ ವೃದ್ಧ ವಾಸವಾಗಿದ್ದ ನಗರದ ವಾರ್ಡ್ 30ರ ಸುತ್ತ ಇದೀಗ ಜಿಲ್ಲಾಡಳಿತದ ಚಿತ್ತ, ತಮ್ಮ ಬಡಾವಣೆಗೆ ವೈದ್ಯರು, ಜಿಲ್ಲಾಡಳಿತ ಅಧಿಕಾರಿಗಳ ತಂಡ ಬಂದು ಹೋಗೋದನ್ನ ನೋಡುತ್ತಿರುವ ಜನ ಪರೇಶಾನ್, ಕೊರೋನಾ ಮಾರಣಾಂತಿಕವಾಗಿದ್ದರಿಂದ ಇವರೆಲ್ಲರಿಗೂ ಈಗ ಒಳಗೊಳಗೆ ಹೆದರಿಕೆ, ಆದರೆ ಬಾಯಿಬಿಟ್ಟು ಹೇಳದಂತಹ ಸ್ಥಿತಿ. 

ಮೋಮಿನಪುರಾ ಬಡಾವಣೆಯಲ್ಲಿ ಜನ ರಸ್ತೆಯಲ್ಲೇ ಕಾಣುತ್ತಿಲ್ಲ, ಸೋಂಕಿತ ವಾಸವಿದ್ದ ಮನೆ ಹತ್ತಿರ ಯಾರೂ ಸುಳಿಯದಂತಹ ವಾತಾವರಣ. ಸಾವನ್ನಪ್ಪಿದ ವೃದ್ಧರ ಮನೆ ತೋರಿಸಲೂ ಸಹ ಹಿಂದೇಟು ಹಾಕುತ್ತಿದ್ದಾರೆ ಬಡಾವಣೆ ವಾಸಿಗಳು. ದೂರದಿಂದಲೇ ಓ ದೇಖೋ ಘರ್... ಎಂದು ಓಡಿ ಹೋಗುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡವರು ಹೊರಗಡೆ ಅಲ್ಲಲ್ಲಿ ಕಾಣುತ್ತಿದ್ದಾರೆ. 

ಕೊರೋನಾ ವೈರಾಣು ಸೋಂಕಿನಿಂದ ಸಾವನ್ನಪ್ಪಿರುವ ಪ್ರಕರಣ ಈ ಪ್ರದೇಶದಲ್ಲಿ ಸಂಚ ಲನ ಮೂಡಿಸಿದರೂ ಇಲ್ಲಿ ನಿರೀಕ್ಷೆಯಂತೆ ವೈರಾಣು ಸೋಂಕಿನ ಬಗ್ಗೆಯಾಗಲಿ, ಮುನ್ನೆಚ್ಚ ರಿಕೆ ಕ್ರಮಗಳ ಬಗ್ಗೆಯಾಗಲಿ ಸಾರ್ವಜನಿಕರಿಗೆ ಮಾಹಿತಿ ರವಾನಿಸುವ ಕೆಲಸ ನಡೆಯುತ್ತಿರೋದು ಮಾತ್ರ ಅಷ್ಟಕ್ಕಷ್ಟೆ. ಜನತೆಗೆ ತಿಳುವಳಿಕೆ ಹೇಳುವ ಕೆಲಸಕ್ಕೇ ಆದ್ಯತೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಇಲ್ಲಿ ಎಲ್ಲಿಯೂ ಮಾಹಿತಿ ರವಾನೆ ಕೆಲಸ ಕಾಣುತ್ತಿಲ್ಲ

* ಬಡಾವಣೆ ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ಮೃತ ವೃದ್ಧನ ಸಾವಿನ ಸುತ್ತಮುತ್ತ ಚರ್ಚೆ 
*ದೂರದಿಂದಲೇ ಮೃತನ ಮನೆ ತೋರಿಸಿ ಪಾರಾಗುತ್ತಿದ್ದಾರೆ ಮೋಮಿನಪುರಾ ಬಡಾವಣೆ ಜನತೆ 
* ಬಡಾವಣೆ ಸುತ್ತಮುತ್ತ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ 
*ಕೆಲವು ಜನ ಮಾತ್ರ ಮಾಸ್ಕ್ ಧರಿಸಿ ಓಡಾಡುತ್ತಿರುವುದು ಬಿಟ್ಟರೆ ಬಹುತೇಕ ಜನ ಎಂದಿನಂತೆ ಇದೆ
 

Latest Videos
Follow Us:
Download App:
  • android
  • ios