ಇಲ್ಲಿನ ರೈತರ ಮಕ್ಕಳಿಗಿದೆ ಗುಡ್ ನ್ಯೂಸ್. ಖಚಿತ ಉದ್ಯೋಗ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. 

ನಂಜನಗೂಡು (ಡಿ.16) : ಏಷಿಯನ್‌ ಪೈಂಟ್ಸ್‌ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡಿರುವ ರೈತರ ಮಕ್ಕಳಿಗೆ ಭೂಮಿ ಕಳೆದುಕೊಂಡ ಜಾಗದಲ್ಲೇ ಉದ್ಯೋಗ ನೀಡಲು ಕಾರ್ಖಾನೆ ಒಪ್ಪಿಗೆ ನೀಡಿದ್ದು, ನಿಮ್ಮ ನ್ಯಾಯಯುತ ಬೇಡಿಕೆ ಈಡೇರಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ತಾಲೂಕಿನ ಇಮ್ಮಾವು ಗ್ರಾಮದ ಬಳಿಯಿರುವ ಏಷಿಯನ್‌ ಪೈಂಟ್ಸ್‌ ಕಾರ್ಖಾನೆ ಮುಂಭಾಗದಲ್ಲಿ ಭೂಮಿ ಕಳೆದುಕೊಂಡಿರುವ ರೈತರ ಮಕ್ಕಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಕಳೆದ 54 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು, ಅಲ್ಲದೆ 4 ದಿನಗಳಿಂದ ಕಾರ್ಖಾನೆ ಗೇಟ್‌ ಮುಚ್ಚಿ ಉತ್ಪಾದನೆಗೆ ಅವಕಾಶ ನೀಡದ ಪ್ರತಿಭಟನೆ ಮುಂದುವರೆಸಿದ್ದು, ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದರು.

ಶಾಸಕ ಸಾರಾ, ಡಿಸಿ ರೋಹಿಣಿ ನಡುವೆ ‘ಮಾಸ್ಕ್‌ ಟಾಕ್‌’! .

ನಾನು ಕಳೆದ ಬಾರಿ ಭೇಟಿ ನೀಡಿ 15 ದಿನಗಳ ಕಾಲಾವಕಾಶ ನೀಡಿದಲ್ಲಿ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮವಹಿಸುವುದಾಗಿ ತಿಳಿಸಿದ್ದೆ, ಅದರಂತೆ ಸರ್ಕಾರ ಏಷಿಯನ್‌ ಪೈಂಟ್ಸ್‌ ಕಾರ್ಖಾನೆಯವರ ಬಳಿ ಪತ್ರ ವ್ಯವಹಾರ ನಡೆಸಿದ್ದು, ಭೂಮಿ ಕಳೆದುಕೊಂಡ ಜಾಗದಲ್ಲೇ ಉದ್ಯೋಗ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಅದರಂತೆ ಕೊರೋನಾ ಬಂದ ಕಾರಣ ತರಬೇತಿ ಮುಗಿದಿಲ್ಲ, ಆದ್ದರಿಂದ ಇನ್ನೂ 6 ತಿಂಗಳ ಕಾಲ ವೇತನ ಭತ್ಯೆಯ ಜೊತೆಗೆ ತರಬೇತಿ ನೀಡಿ ಉದ್ಯೋಗ ನೀಡುತ್ತೇವೆಂದು ಕಂಪನಿಯವರು ಹೇಳಿದ್ದಾರೆ. ಅವರು ಪ್ರತಿಭಟನೆ ನಿಲ್ಲಿಸಿ ಕಾರ್ಖಾನೆ ನಡೆಯಲು ಅವಕಾಶ ಮಾಡಿಕೊಡಲಿ ಎಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಒಪ್ಪಿಗೆ ಸೂಚಿಸಿದಲ್ಲಿ ಕಂಪನಿ ಜೊತೆಗೆ ಮಾತನಾಡುವುದಾಗಿ ತಿಳಿಸಿದರು.

ಏಷಿಯನ್‌ ಪೈಂಟ್ಸ್‌ ಕಾರ್ಖಾನೆಯಲ್ಲಿ ರಾಸಾಯನಿಕ ಮಟ್ಟದಲ್ಲಿ ವ್ಯತ್ಯಾಸವಾದಲ್ಲಿ ಅವಘಡವಾಗುತ್ತದೆ. ಈಗಾಗಲೇ ವಿಶಾಖಪಟ್ಟಣದಲ್ಲಿ ಅವಘಡ ಸಂಭವಿಸಿದ ಉದಾಹರಣೆ ಇದೆ, ಆದ್ದರಿಂದಲೇ ಅವರು ತರಭೇತಿ ನೀಡಿ ಇದೇ ಸ್ಥಳದಲ್ಲಿ ಇನ್ನೊಂದು ಶಾಖೆ ತೆರೆದು ಕೆಲಸ ನೀಡುವರೂ ಅಥವಾ ಇದೇ ಪ್ಲಾಂಟ್‌ನಲ್ಲಿ ಕೆಲಸ ನೀಡುವರೂ ಗೊತ್ತಿಲ್ಲ. ನಾವು ಅವರೊಂದಿಗೆ ನೀವು ಸ್ಯಾನಿಟೈಸ್‌ ಶಾಖೆ ತೆರಯುದಾದಲ್ಲಿ ಇದೇ ಜಾಗದಲ್ಲಿ ತೆರದು ಕೆಲಸ ನೀಡಿ ಎಂದು ಸೂಚಿಸಿದ್ದೇವೆ ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದರು.

ಇಷ್ಟುದಿನ ರೈತರು ತಾಳ್ಮೆ ಕಳೆದುಕೊಳ್ಳದೆ ಶಾಂತಿಯುತವಾಗಿ ಪ್ರತಿಭಟಸಿದ್ದೀರಿ, ನಿಮಗೆ ಧನ್ಯವಾದಗಳು. ಇಷ್ಟುದಿನ ಪ್ರತಿಭಟನೆ ಮುಂದುವರೆಯಬಾರದಿತ್ತು. ಮೊದಲಿನಿಂದಲೂ ಇದೇ ರೀತಿ ನಡೆದು ಮುಂದಿರುವುದರಿಂದ ಈಗಾಗಿದೆ ನಿಮ್ಮ ಹೋರಾಟಕ್ಕೆ ನ್ಯಾಯಯುತ ಪ್ರತಿಫಲ ಸಿಕ್ಕಿದೆ ಎಂದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ನೀವು ಭೇಟಿ ನೀಡಿ 15 ದಿನದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮವಹಿಸುವುದಾಗಿ ತಿಳಿಸಿದ್ದೀರಿ, ಅದರಂತೆ ಸಿಹಿ ಸುದ್ದಿ ತಂದಿರುವುದಕ್ಕೆ ಧನ್ಯವಾದಗಳು, ಕಂಪನಿ ಒಪ್ಪಂದ ಪತ್ರವನ್ನು ನಿಮ್ಮ ಕೈಯಿಂದಲೇ ತೆಗೆದುಕೊಳ್ಳುವಾಸೆ ನಂತರ ಪ್ರತಿಭಟನೆ ಕೈ ಬಿಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸಿ ವೆಂಕಟರಾಜು, ತಹಸೀಲ್ದಾರ್‌ ಕೆ.ಎಂ. ಮಹೇಶ್‌ ಕುಮಾರ್‌, ಡಿವೈಎಸ್ಪಿ ಗೋವಿಂದರಾಜು, ರೈತರಾದ ಚಂದ್ರಶೇಖರ್‌ ಮೇಟಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ರೈತರು ಇದ್ದರು.