ಬೆಂಗಳೂರು [ಸೆ.05]:  ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೈಕ್‌ಗೆ ಹಾಲು ಪೂರೈಕೆ ವಾಹನ ಡಿಕ್ಕಿಯಾಗಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರು (ಎಎಸ್‌ಐ) ಸಾವನ್ನಪ್ಪಿರುವ ಘಟನೆ ಯಲಹಂಕ ಸಮೀಪ ನಡೆದಿದೆ.

ದೇವನಹಳ್ಳಿ ಸಂಚಾರ ಠಾಣೆ ಎಎಸ್‌ಐ ವೆಂಕಟರಾಮು (55) ಮೃತರು. ಕೆಲಸ ಮುಗಿಸಿಕೊಂಡು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಅವರು ಮನೆಗೆ ತೆರಳುವಾಗ ಜಕ್ಕೂರು ಸವೀರ್‍ಸ್‌ ರಸ್ತೆಯಲ್ಲಿ ಘಟನೆ ನಡೆದಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಳವಳ್ಳಿ ತಾಲೂಕಿನವರಾದ ವೆಂಕಟರಾಮು, ಯಲಹಂಕದ ಪೊಲೀಸ್‌ ಕ್ವಾಟ್ರ್ರಸ್‌ನಲ್ಲಿ ಪತ್ನಿ ಮತ್ತು ಮೂವರು ಮಕ್ಕಳ ಜತೆ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ಸೇವಾ ಹಿರಿತನದ ಆಧಾರದಡಿ ಎಎಸ್‌ಐ ಹುದ್ದೆಗೆ ಮುಂಬಡ್ತಿ ಹೊಂದಿದ್ದ ಅವರು, ಪ್ರಸುತ್ತ ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಅಪಘಾತದ ವಿಷಯ ತಿಳಿದ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಬೆಳಗ್ಗೆ ಮೃತರ ಮನೆಗೆ ಭೇಟಿ ನೀಡಿ ಪ್ರಾರ್ಥಿವ ಶರೀರದ ದರ್ಶನ ಪಡೆದರು. ಬಳಿಕ ಮೃತ ಎಎಸ್‌ಐ ಕುಟುಂಬಕ್ಕೆ ಸಾಂತ್ವನ ಹೇಳಿದ ಆಯುಕ್ತರು, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಕೊಡಿಸುವುದಾಗಿ ಭರವಸೆ ನೀಡಿದರು. ಮಳವಳ್ಳಿ ತಾಲೂಕಿನ ಮೃತರ ಸ್ವಗ್ರಾಮದಲ್ಲಿ ಸಂಜೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೇರಿತು.