ಆನಂದ್ ಎಂ. ಸೌದಿ

ಯಾದಗಿರಿ(ಏ.17): ಕೊರೋನಾ ಆತಂಕದ ಮಧ್ಯೆ, ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಆಶಾ ಕಾರ್ಯಕರ್ತೆಯೊಬ್ಬರು, ಲ್ಯಾಬ್ ರಿಪೋರ್ಟ್ ನೆಗೆಟಿವ್ ಬಂದಿದ್ದೇ ತಡ, ಡಿಸ್ಚಾರ್ಜ್ ಆದ ಮಾರನೇ ದಿನದಿಂದಲೇ ಕರ್ತವ್ಯದತ್ತ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದ್ದಾರೆ.

ಕೊರೋನಾ ತಗುಲಿದೆ ಎಂಬ ವದಂತಿಗಳು ತಮ್ಮ ಹಾಗೂ ಕುಟುಂಬದ ಮನಸ್ಸಿಗೆ ತೀವ್ರ ಘಾಸಿ ಮಾಡಿದ್ದರೂ ಸಹ, ರಜೆ ಹಾಕಿ ಕುಳಿತರೆ ಕೊರೋನಾ ತಡೆಗಟ್ಟುವ ಜಿಲ್ಲಾಡಳಿತದ ಪ್ರಯತ್ನಕ್ಕೆ ಹಿಂದೇಟು ಹಾಕಿದಂತಾಗುತ್ತದೆ ಎಂದೆನಿಸಿ, ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಜಿಲ್ಲೆಯ ಶಹಾಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀದೇವಿಯವರ ನಿರ್ಧಾರ ಆಶಾ ಕಾರ್ಯಕರ್ತೆಯರ ವಲಯದಲ್ಲಿ ಬಲ ಮೂಡಿಸಿದೆ.

ಕೊರೋನಾ ಬಗ್ಗೆ ಅರಿವು: ಆಶಾ ಕಾರ್ಯಕರ್ತೆಯರಿಗೆ ಗ್ರಾಮಸ್ಥರಿಂದ ಪುಷ್ಪವೃಷ್ಟಿ

ಏನಾಗಿತ್ತು ?

ಮಹಾನಗರಗಳಿಗೆ ದುಡಿಯಲು ಹೋಗಿದ್ದ ಜನರು ಲಾಕ್‌ಡೌನ್ ನಂತರ ಗುಂಪು ಗುಂಪಾಗಿ ಜಿಲ್ಲೆಯ ವಿವಿಧೆಡೆಯ ಹಳ್ಳಿಗಳಿಗೆ ವಾಪಸ್ಸಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ, ಅವರೆಲ್ಲರ ವಿವರಗಳು, ಆರೋಗ್ಯ ಸ್ಥಿತಿಗತಿ ಮುಂತಾದವುಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕಾದ ಹಿನ್ನೆಲೆಯಲ್ಲಿ ದಿನಾಲೂ ನೂರಾರು ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದ ಶ್ರೀದೇವಿ ದಿಢೀರನೇ ಅಸ್ವಸ್ಥಗೊಂಡು ಆಸ್ಪತ್ರೆ ಸೇರ್‍ತಾರೆ.

ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗೆಂದು ಕಳುಹಿಸಲಾಗುತ್ತದೆ. ಬೆನಕನಹಳ್ಳಿ ಗ್ರಾಮದಲ್ಲಿನ ಎಲ್ಲ ಮನೆಗಳ ಸರ್ವೆ ನಡೆಸಿ, ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಮೇಲೂ ನಿಗಾ ಇಡಲಾಗುತ್ತದೆ. ಇದನ್ನು ನೋಡಿ, ಶ್ರೀದೇವಿಗೆ ಕೊರೋನಾ ತಗುಲಿದೆ ಎಂಬ ವದಂತಿಗಳು ಪತಿ, ಮಕ್ಕಳನ್ನ ಆಘಾತಕ್ಕೀಡಾಗಿಸಿದರೆ, ಇಡೀ ಗ್ರಾಮವೇ ದಿಗಿಲು ಬೀಳುತ್ತದೆ.

ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ತಗುಲಿದೆಯಂತೆ ಅನ್ನೋ ವದಂತಿ ಎಲ್ಲ ಕಡೆಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ. ಆತಂಕದ ಗೆರೆಗಳು ಮೂಡುತ್ತವೆ. ಸಹೋದ್ಯೋಗಿ ಅಸ್ವಸ್ಥ ಅನ್ನೋ ಮಾತುಗಳು ಉಳಿದವರನ್ನೂ ಅರರನ್ನಾಗಿಸುತ್ತದೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆಯ ವಾತಾವರಣ ನಿರ್ಮಾಣವಾಗುತ್ತದೆ.

ಕೊನೆಗೆ, ಪ್ರಯೋಗಾಲಯ ವರದಿಯಲ್ಲಿ ಕೊರೋನಾ ಸೋಂಕು ತಗುಲಿಲ್ಲ ಎಂಬುದು ದೃಢವಾಗಿ, ರಿಪೋರ್ಟ್ ನೆಗೆಟಿವ್ ಎಂದು ಕೈಸೇರಿದಾಗ ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಶ್ರೀದೇವಿ ಚಿಕಿತ್ಸೆ ಪಡೆದು ವಾಪಸ್ಸಾದ ನಂತರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ವೃತ್ತಿಪರತೆ ಮೆರೆದಿದ್ದಾರೆ.

ಲಾಕ್ ಡೌನ್ ವೇಳೆ ಹಳ್ಳಿಗಳಿಗೆ ವಾಪಸ್ಸಾದವರ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾಗ, ಜ್ವರಾ ಬಂದು ಉಸಿರಾಟಕ್ಕೆ ಕಷ್ಟವಾಗಿತ್ತು. ಆಸ್ಪತ್ರೆಗೆ ದಾಖಲಾಗಿ, ಸಹಜವಾದ ಶಂಕೆಯಿಂದ ಲ್ಯಾಬ್‌ಗೆ ಸ್ಯಾಂಪಲ್ ಕಳುಹಿಸಿದ್ರು.. ಮುಂಜಾಗ್ರತೆ ಕಾರಣಕ್ಕಾಗಿ ನಮ್ಮೂರಿಗೆ ಬಂದಿದ್ದ ಅಧಿಕಾರಿಗಳು ಎಲ್ಲರ ಮನೆಗಳಲ್ಲಿ ಸರ್ವೆ ಮಾಡಿದ್ರು. ಅಷ್ಟೊತ್ತಿಗಾಗಲೇ ನನಗೆ ಕೊರೋನಾ ತಗುಲಿದೆಂದು ವದಂತಿಗಳು ಹಬ್ಬಿಬಿಟ್ವು. ಎಲ್ರೂ ಅನುಮಾನ ಮಾಡಿದ್ರು, 5 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ, ಗಂಡ, ಮಕ್ಕಳು ಆಘಾತಕ್ಕೊಳಗಾದ್ರು. ಯಾವಾಗ ರಿಪೋರ್ಟ್ ನೆಗೆಟಿವ್ ಅಂತ ಬಂತೋ, ಆಗೆಲ್ಲಾರೂ ನಿಟ್ಟುಸಿರು ಬಿಟ್ರು. ಈಗ ಮತ್ತೇ ಡ್ಯೂಟಿಗೆ ಹಾಜರಾಗಿ, ಮನೆ ಮನೆಗೆ ತೆರಳಿ ಸರ್ವೆ ಮಾಡ್ತಿದ್ದೇವೆ. ಕೊರೋನಾ ತಡೆಗಟ್ಟಲು ಶ್ರಮಿಸಬೇಕಲ್ವೇ ಎಂದು  ಆಶಾ ಕಾರ್ಯಕರ್ತೆ ಶ್ರೀದೇವಿ ಮೂಲಿಮನಿ ಹೇಳಿದ್ದಾರೆ.